




ಲಂಡನ್: ಮಹಿಳೆಯೊಬ್ಬರನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಲಂಡನ್ ನ್ಯಾಯಾಲಯ 34 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಭಾರತೀಯ ಮೂಲದ ಗಗನ್‌ದೀಪ್ ಸಿಂಗ್ (34) ಶಿಕ್ಷೆಗೆ ಗುರಿಯಾದ ವ್ಯಕ್ತಿ. ಐಸಲ್‌ವರ್ತ್ ಕ್ರೌನ್ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆದು ಶಿಕ್ಷೆ ವಿಧಿಸಲಾಗಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲೇ ಈ ಪ್ರಕರಣದಲ್ಲಿ ಈತ ಆರೋಪಿ ಎಂದು ಸಾಬೀತಾಗಿತ್ತು. ಇದೀಗ ಕೋರ್ಟ್ 34 ವರ್ಷಗಳ ಜೈಲು ಶಿಕ್ಷೆ ನೀಡಿದ್ದು, ಇದರಲ್ಲಿ 28 ವರ್ಷಗಳ ಕಾಲ ಕಡ್ಡಾಯವಾಗಿ ಜೈಲಿನಲ್ಲೇ ಕಾಲ ಕಳೆಯಬೇಕು. ಉಳಿದ 6 ವರ್ಷಗಳು ಜೈಲಿನಿಂದ ಹೊರಗಡೆ ಬಂದರೂ ಕೂಡ (ಎಕ್ಸ್ಟೆಂಡೆಡ್ ಲೈಸೆನ್ಸ್) ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
2024ರ ಜೂನ್ ತಿಂಗಳಿನಲ್ಲಿ 24 ವರ್ಷದ ಯುವತಿಯೊಬ್ಬಳಿಗೆ ಥೈಲ್ಯಾಂಡ್‌ನಿಂದ ಯುಕೆಗೆ ಸೂಟ್‌ಕೇಸ್ ಒಂದನ್ನು ತಲುಪಿಸುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ಸೂಟ್‌ಕೇಸ್‌ನಲ್ಲಿ ಏನಿದೆ ಎಂದು ತಿಳಿಯದ ಕಾರಣ ಆಕೆ ಅದನ್ನು ತರಲು ನಿರಾಕರಿಸಿದ್ದಳು. ಇದರಿಂದ ಆಕ್ರೋಶಗೊಂಡ ದುಷ್ಕರ್ಮಿ, ಆಕೆ ಬರ್ಮಿಂಗ್‌ಹ್ಯಾಮ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಪಶ್ಚಿಮ ಲಂಡನ್‌ನ ಹ್ಯಾನ್‌ವೆಲ್‌ನಲ್ಲಿರುವ ತಮ್ಮ ಮನೆಗೆ ಅಪಹರಿಸಿಕೊಂಡು ಹೋಗಿದ್ದರು. ಬಳಿಕ ಆಕೆಯನ್ನು ಒಂದು ದಿನಕ್ಕೂ ಹೆಚ್ಚು ಕಾಲ ಮನೆಯಲ್ಲಿ ಕೂಡಿ ಹಾಕಿ ಹಿಂಸೆ ನೀಡಿದ್ದಾನೆ. ಆಕೆಯನ್ನ ಮನಬಂದಂತೆ ಥಳಿಸಿದ್ದಲ್ಲದೇ, ಬಟ್ಟೆ ಬಿಚ್ಚಿಸಿ ದೇಹವನ್ನು ಸುಟ್ಟು ಚಿತ್ರಹಿಂಸೆ ಕೊಟ್ಟಿದ್ದ. ಅದಲ್ಲದೇ ಎರಡು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ.
ಇದಾದ ಬಳಿಕ ಯುವತಿಯನ್ನ ಬಿಟ್ಟು ಕಳುಹಿಸುವಾಗ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ತೀವ್ರವಾಗಿ ಆಘಾತಕ್ಕೊಳಗಾಗಿದ್ದ ಯುವತಿ, ತನ್ನ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ದೂರು ನೀಡಲು ಹಿಂಜರಿದಿದ್ದಾಳೆ. ಬಳಿಕ ನಡೆದ ವಿಷಯವನ್ನೆಲ್ಲಾ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಾಳೆ. ಸಂತ್ರಸ್ತೆಯ ತಾಯಿ ಮಗಳ ಮೇಲೆ ನಡೆದ ದುಷ್ಕೃತ್ಯಕ್ಕೆ ನ್ಯಾಯ ಪಡೆಯಲು ಮೆಟ್ರೋಪಾಲಿಟನ್ ಪೊಲೀಸರಿಗೆ ದೂರು ನೀಡಿದ್ದರು.
ಯುವತಿ ಆರಂಭದಲ್ಲಿ ಹೆದರಿ ಪ್ರಕರಣವನ್ನು ಮುಂದುವರೆಸುವುದು ಬೇಡ ಎಂದಿದ್ದಳು. ಆದರೆ ಪ್ರಕರಣದ ಗಂಭೀರತೆ ಅರಿತ ಪೊಲೀಸರು ಆಕೆಗೆ ಧೈರ್ಯ ತುಂಬಿ ಪ್ರಕರಣದ ತನಿಖೆ ಮುಂದುವರೆಸಿದರು. ಆಕೆಯ ಮೇಲೆ ಅತ್ಯಾಚಾರ ನಡೆದಾಗ ಯುವತಿ ಧರಿಸಿದ್ದ ಬಟ್ಟೆಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದಾಗ ಗಗನ್‌ದೀಪ್ ಸಿಂಗ್ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಅತ್ಯಂತ ಸೂಕ್ಷ್ಮವಾಗಿ ಪ್ರಕರಣವನ್ನ ಭೇದಿಸಿದ ಕಾರಣ ಅಂತಿಮವಾಗಿ ಅಪರಾಧಿ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.








