


ಬೆಂಗಳೂರು: ನಮ್ಮ ಮನೆ ಮುಂದೆ ಇರುವ ಕಸ ಮೊದಲು ಕ್ಲೀನ್ ಮಾಡು ಎಂದು ಪೌರ ಕಾರ್ಮಿಕರ ಜೊತೆ ಮಹಿಳೆಯೊಬ್ಬಳು ಕಿರಿಕ್ ಮಾಡಿದ ಘಟನೆ ನೆಲಮಂಗಲದಲ್ಲಿ ನಡೆದಿದೆ. ಇದರಿಂದ ಸಿಟ್ಟಿಗೆದ್ದ ಪೌರ ಕಾರ್ಮಿಕರು ಒಂದು ಲೋಡ್ ಕಸವನ್ನು ಮಹಿಳೆಯ ಮನೆ ಮುಂದೆ ಸುರಿದು ಆಕ್ರೋಶ ಹೊರಹಾಕಿದ್ದಾರೆ.
ವೀವರ್ಸ್ ಕಾಲೋನಿಯಲ್ಲಿ ಪೌರ ಕಾರ್ಮಿಕರಿಗೆ ಮಹಿಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಆಕ್ರೋಶಗೊಂಡ ಪೌರ ಕಾರ್ಮಿಕರು ಮಹಿಳೆಯ ಮನೆಯ ಮುಂದೆ ಟ್ರ್ಯಾಕ್ಟರ್ನಿಂದ ಕಸ ಸುರಿದಿದ್ದಾರೆ.
ವಾರ್ಡ್ ನಂಬರ್ 14ರ ಪುಟ್ಟಮ್ಮ ಎಂಬವರು ಪೌರ ಕಾರ್ಮಿಕ ಅಶೋಕ್ ಕುಮಾರ್ ಅವರೊಂದಿಗೆ ಕಸದ ತೆರವು ವಿಚಾರವಾಗಿ ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ. ರಾಜಕಾಲುವೆ ಬಳಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ವೇಳೆ, ಮೊದಲು ತಮ್ಮ ಮನೆಯ ಮುಂದೆ ಕಸ ತೆರವು ಮಾಡಬೇಕು ಎಂದು ಮಹಿಳೆ ಪಟ್ಟು ಹಿಡಿದಿದ್ದಾರೆ. ಇದೇ ವಿಚಾರವಾಗಿ ಪೌರ ಕಾರ್ಮಿಕ ಹಾಗೂ ಮಹಿಳೆಯ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಮಹಿಳೆ ಪೌರ ಕಾರ್ಮಿಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಾರ್ವಜನಿಕ ಸ್ವಚ್ಛತಾ ಕಾರ್ಯದ ವೇಳೆ ನಡೆದ ಈ ಘಟನೆ ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.






