Thursday, August 13, 2026
spot_imgspot_img
spot_imgspot_img

ಭಾರತದ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇಮಕ

- Advertisement -
- Advertisement -

ನವದೆಹಲಿ: ಭಾರತದ ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಧೀರಜ್‌ ಸೇಠ್‌ ಅವರು ಜೂನ್‌ 30 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸೇನೆಯ ಹಾಲಿ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ ಅವರ ನಿವೃತ್ತಿಯ ಬಳಿಕ ಲೆಫ್ಟಿನೆಂಟ್‌ ಜನರಲ್‌ ಧೀರಜ್‌ ಸೇಠ್‌ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಶನಿವಾರ ಕೇಂದ್ರ ಸರ್ಕಾರ ಹೇಳಿದೆ.

ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಪ್ರಸ್ತುತ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೂನ್‌ 30 ರಂದು ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, 2028 ರ ಆಗಸ್ಟ್‌ 31 ರ ವರೆಗೆ ಅಧಿಕಾರದಲ್ಲಿ ಇರಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಆದೇಶ ಪತ್ರದಲ್ಲಿ ತಿಳಿಸಿದೆ.

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿ ಮತ್ತು ಆರ್ಮರ್ಡ್ ಕಾರ್ಪ್ಸ್ ಅಧಿಕಾರಿಯಾಗಿರುವ ಲೆಫ್ಟಿನೆಂಟ್ ಜನರಲ್ ಸೇಠ್, 40 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಖಡಕ್ವಾಸ್ಲಾ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿರುವ ಧೀರಜ್‌ ಸೇಠ್‌ ಅವರು 1986 ರ ಡಿಸೆಂಬರ್‌ ನಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದರು. 4 ದಶಕಗಳ ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಹಾಗೂ ವೈವಿಧ್ಯಮಯ ಭೂ ಪ್ರದೇಶ, ಸಂಘರ್ಷ ಪರಿಸರಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

1997 ರಲ್ಲಿ ಆರ್ಮರ್ಡ್ ಕಾರ್ಪ್ಸ್‌ನ 20ನೇ ಲ್ಯಾನ್ಸರ್ಸ್‌ನಲ್ಲಿ(ಸೈನಿಕ ವಿಭಾಗ) ಸೇವೆ ಸಲ್ಲಿಸಿದ್ದ ಜನರಲ್‌ ಶಂಕರ್‌ ರಾಯ್‌ ಚೌಧರಿ ಅವರ ಬಳಿಕ ಸೇನಾ ಮುಖ್ಯಸ್ಥರಾದ ಮೊದಲ ಆರ್ಮರ್ಡ್ ಕಾರ್ಪ್ಸ್ ನ ಅಧಿಕಾರಿ ಎಂಬ ಹೆಗ್ಗಳಿಕೆಗೂ ಸೇಠ್‌ ಪಾತ್ರರಾಗಿದ್ದಾರೆ.

ಮರುಭೂಮಿ ವಲಯದಲ್ಲೂ ಆರ್ಮರ್ಡ್ ರೆಜಿಮೆಂಟ್‌ ಕಮಾಂಡರ್ ಆಗಿ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ದಂಗೆ ನಿಗ್ರಹ ಗ್ರಿಡ್‌ನ ಭಾಗವಾದ ಯೂನಿಫಾರ್ಮ್ ಫೋರ್ಸ್‌ ಕಮಾಂಡರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಲೆಫ್ಟಿನೆಂಟ್ ಜನರಲ್ ಆಗಿ ಬಡ್ತಿ ಪಡೆದ ನಂತರ, ಅವರು 21ನೇ ಸ್ಟ್ರೈಕ್ ಕಾರ್ಪ್ಸ್‌ಗೆ ಕಮಾಂಡರ್ ಆಗಿ ಮತ್ತು ನಂತರ ದೆಹಲಿ ಪ್ರದೇಶದ ಜನರಲ್ ಕಮಾಂಡಿಂಗ್‌ ಆಫೀಸರ್ ಕಮಾಂಡಿಂಗ್ ಆಗಿ ಸೇವೆ ಮಾಡಿದ್ದಾರೆ. ಸೇನಾ ಕಮಾಂಡರ್ ಹುದ್ದೆಗೆ ಬಡ್ತಿ ಪಡೆದ ನಂತರ, ಅವರು ಸೌತ್ ವೆಸ್ಟರ್ನ್ ಕಮಾಂಡ್ ಮತ್ತು ಸದರ್ನ್ ಕಮಾಂಡ್‌ನಲ್ಲಿ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಕೆಲಸ ನಿರ್ವಹಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವತಂತ್ರ ಶಸ್ತ್ರಸಜ್ಜಿತ ಬ್ರಿಗೇಡ್‌ನ ಮೇಜರ್, ಅಂಗೋಲಾದಲ್ಲಿ ವಿಶ್ವಸಂಸ್ಥೆಯ ಮಿಷನ್‌ ಕಾರ್ಯಾಚರಣೆ ಅಧಿಕಾರಿ, ಸೇನಾ ಪ್ರಧಾನ ಕಚೇರಿಯಲ್ಲಿ ಸಹಾಯಕ ಮಿಲಿಟರಿ ಕಾರ್ಯದರ್ಶಿ, ಸೌತ್ ವೆಸ್ಟರ್ನ್ ಕಮಾಂಡ್‌ನಲ್ಲಿ ಬ್ರಿಗೇಡಿಯರ್ ಜನರಲ್ ಸ್ಟಾಫ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ.

- Advertisement -

Related news

error: Content is protected !!