Sunday, June 21, 2026
spot_imgspot_img
spot_imgspot_img

ದಾಖಲೆ ಇಲ್ಲದೇ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್: ಎಂಆರ್‌ಪಿಎಲ್ ಉದ್ಯೋಗಿ ಸೇರಿ ಇಬ್ಬರ ವಿರುದ್ಧ ಎಫ್‌ಐಆರ್, ಇಬ್ಬರು ಕಾನ್ಸ್‌ಟೇಬಲ್‌ ಅಮಾನತು

- Advertisement -
- Advertisement -

ಬಜ್ಪೆ: ಇಲ್ಲಿನ ಎಂಆರ್‌ಪಿಎಲ್‌ಗೆ ಹೊಸದಾಗಿ ಸೇರುವ ಕಾರ್ಮಿಕರಿಗೆ ದಾಖಲೆಗಳೇ ಇಲ್ಲದೆ ಪೊಲೀಸ್‌ ಕ್ಲಿಯರೆನ್ಸ್‌ ಸರ್ಟಿಫಿಕೇಟ್‌ ನೀಡಿರುವ ಆರೋಪದಲ್ಲಿ ಎಂಆರ್‌ ಪಿಎಲ್‌ ಉದ್ಯೋಗಿ ಸಹಿತ ಇಬ್ಬರ ವಿರುದ್ಧ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿ ಬಜ್ಪೆ ಪೊಲೀಸ್‌ ಠಾಣೆಯ ಇಬ್ಬರು ಪೊಲೀಸ್‌ ಕಾಸ್ಟೇಬಲ್‌ ಗಳನ್ನು ಮಂಗಳೂರು ನಗರ ಪೊಲೀಸ್‌ ಆಯುಕ್ತರು ಅಮಾನತುಗೊಳಿಸಿದ್ದಾರೆ.ಎಂಆರ್‌ಪಿಎಲ್‌ ಉದ್ಯೋಗಿ ಹಾಗೂ ಬ್ರೋಕರ್‌ ಮಮತಾ ಹಾಗೂ ಮತ್ತೋರ್ವ ಬ್ರೋಕರ್‌ ಭರತ್ ಎಕ್ಕಾರ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೂ ನಕಲಿ ಪೊಲೀಸ್‌ ಕ್ಲಿಯೆರನ್ಸ್ ಸರ್ಟಿಫಿಕೇಟ್‌ನ್ನು ತಯಾರಿಸಿಕೊಂಡು ಇಲಾಖೆ ಕರ್ತವ್ಯಕ್ಕೆ ನಂಬಿಕೆ ದ್ರೋಹ, ವಂಚನೆ ಮತ್ತು ಮೋಸ ಮಾಡಿರುವ ಬಜ್ಪೆ ಪೊಲೀಸ್‌ ಕಾನ್‌ ಸ್ಟೇಬಲ್‌ ಆಶಾ ಹಾಗೂ ಹೆಡ್‌ ಕಾನ್‌ ಸ್ಟೇಬಲ್‌ ಮಂಜುನಾಥ ಎಂಬವರನ್ನು ಅಮಾನತು ಮಾಡಲಾಗಿದೆ.

ಈ ಸಂಬಂಧ ಬಜ್ಪೆ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಬಾಲಕೃಷ್ಣ ಎಚ್.ಎನ್. ಅವರು 2026ರ ಫೆಬ್ರವರಿ 17ರಂದು ಬಜಪೆ ಪೊಲೀಸ್‌ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪೊಲೀಸ್ ಐಟಿಯಲ್ಲಿ ವೆರಿಫಿಕೇಷನ್ ರಿಜಿಸ್ಟರ್ ಆಕ್ಷನ್ ನಲ್ಲಿ ಪರಿಶೀಲಿಸುತ್ತಿದ್ದಾಗ ಠಾಣೆಯಲ್ಲಿ ಸ್ವೀಕೃತವಾಗಿರುವ 33 ಪಿಸಿಸಿ ಅರ್ಜಿಗಳ ಪೈಕಿ 31 ಪಿಸಿಸಿ ಅರ್ಜಿಗಳನ್ನು ಪ್ರಿಂಟ್ ತೆಗೆದು ರಿಜಿಸ್ಟರ್ ನಲ್ಲಿ ನಮೂದಿಸದೇ ಕೇವಲ 2 ಪಿಸಿಸಿ ಅರ್ಜಿಗಳನ್ನು ಮಾತ್ರ ಪ್ರಿಂಟ್ ತೆಗೆದು ನಮೂದು ಮಾಡಿದ್ದು, ಉಳಿದ 31 ಪಿಸಿಸಿ ಅರ್ಜಿಗಳನ್ನು ನೇರವಾಗಿ ಶಿಫಾರಸ್ಸು ಮಾಡಿರು ವುದು ಕಂಡು ಬಂದಿದೆ.

ಈ ಬಗ್ಗೆ ಸಂಶಯ ಬಂದು ಮೇಲಿನ ಪಿಸಿಸಿ ಅರ್ಜಿದಾರರ ಪೈಕಿ ಶಿವರಾಜ್ ತಳವಾರ ಎಂಬವರಿಗೆ ಮೊಬೈಲ್‌ಗೆ ಕರೆ ಮಾಡಿ ವಿಚಾರಿಸಿದಾಗ “ತನ್ನ ಆಧಾರ್ ಕಾರ್ಡ್ ಮತ್ತು ವಾಸ್ತವ್ಯದ ಬಗ್ಗೆ ಕರಾರು ಪತ್ರಗಳನ್ನು ಕಾಟಿಪಳ್ಳ-ಕೈಕಂಬದ ಎಮ್.ಆ‌ರ್.ಪಿ.ಎಲ್. ನಲ್ಲಿ ಕೆಲಸ ಮಾಡುವ ಮಮತಾ ಎಂಬವರಿಗೆ ನೀಡಿದ್ದು, ಅವರು ಎಕ್ಕಾರಿನ ಭರತ್‌ ಎಂಬವರಿಗೆ ನೀಡಿ ಅವರ ಮುಖಾಂತರ ಯಾವುದೋ ಪೊಲೀಸರಿಂದ ನನಗೆ ಪಿಸಿಸಿ ಯನ್ನು ಮಾಡಿಕೊಟ್ಟಿರುತ್ತಾರೆ. ಈ ಪಿಸಿಸಿಯ ವಿಚಾರಣೆಗೆ ನಾನು ಬಜಪೆ ಪೊಲೀಸ್‌ ಠಾಣೆಗೆ ಹಾಜರಾಗಿರುವುದಿಲ್ಲ. ಭರತ್ ಮತ್ತು ಮಮತಾ ಅವರು ನನಗೆ ಅದನ್ನು ಮಾಡಿ ಕೊಟ್ಟಿದ್ದಾರೆ” ಎಂದು ತಿಳಿಸಿದ್ದರು.

ಈ ಬಗ್ಗೆ ಠಾಣೆಯ ಪೊಲೀಸ್ ಐಟಿಯಲ್ಲಿ ಪರಿಶೀಲಿಸಿದಾಗ ಸದ್ರಿ ಪಿಸಿಸಿ ಅರ್ಜಿಯನ್ನು ವಿಚಾರಣೆ ನಡೆಸದೇ ಸಾಕ್ಷಿದಾ ರರನ್ನು ವಿಚಾರಿಸಿ ಹೇಳಿಕೆ ಪಡೆಯದೇ, ಅರ್ಜಿದಾರರ ವಾಸ್ತವ್ಯದ ಬಗ್ಗೆ ಯಾವುದೇ ದಾಖಲೆಗಳನ್ನು ಪಡೆಯದೇ, ಪಿಸಿಸಿ ಅರ್ಜಿದಾರರನ್ನು ಪಿರ್ಯಾಧಿದಾರರ ಮುಂದೆ ಹಾಜರುಪಡಿಸಿ ಪಿಸಿಸಿ ಅರ್ಜಿಗಳಿಗೆ ಪೊಲೀಸ್‌ ನಿರೀಕ್ಷಕರ ಕೆಜಿಐಡಿ ನಂಬರ್‌ ಮತ್ತು ಠಾಣಾ ಪಾಸ್ ವರ್ಡ್‌ ನ್ನು ದುರುಪಯೋಗ ಪಡಿಸಿಕೊಂಡು ಪೊಲೀಸ್ ಐಟಿನಲ್ಲಿ ಲಾಗಿನ್ ಆಗಿ ಪಿಎಸ್ ವೆರಿಫೈ ಆಫ್ ನಲ್ಲಿ ದಾಖಲಾತಿ ವೆರಿಫೈ ಎಂದು ಯಾವುದೇ ದಾಖಲೆಗಳನ್ನು ನಮೂದಿಸದೆ ಇಲಾಖೆಗೆ ನಂಬಿಕೆ ದ್ರೋಹ ಮಾಡಿ, ಪೊಲೀಸ್‌ ಇಲಾಖೆಯನ್ನು ವಂಚಿಸುವ ಇರಾದೆಯಿಂದ ನಕಲಿ ಪೊಲೀಸ್‌ ಕ್ಲಿಯೆರನ್ಸ್ ಸರ್ಟಿಫಿಕೇಟ್‌ನ್ನು ತಯಾರಿಸಿ ಇಲಾಖೆ ಕರ್ತವ್ಯಕ್ಕೆ ನಂಬಿಕೆ ದ್ರೋಹ, ವಂಚನೆ ಮತ್ತು ಮೋಸ ಮಾಡಿದ್ದಾರೆ ಎಂದು ಪೊಲೀಸ್‌ ನಿರೀಕ್ಷಕ ಬಾಲಕೃಷ್ಣ ಎಚ್.ಎನ್. ಅವರು ಮಂಗಳುರು ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದರು.

ಅದರಂತೆ ಪಣಂಬೂರು ಉಪ ವಿಭಾಗದ ಎಸಿಪಿ ಶ್ರೀಕಾಂತ್‌ ನೇತೃತ್ವದಲ್ಲಿ ವಿಚಾರಣೆ ನಡೆಸಿದಾಗ ಅಕ್ರಮವಾಗಿ ಪೊಲೀಸ್‌ ಕ್ಲಿಯೆರನ್ಸ್ ಸರ್ಟಿಫಿಕೇಟ್‌ ತಯಾರಿಸಿರುವುದ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬ್ರೋಕರ್‌ ಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಅಮಾನತು ಗೊಂಡಿರುವ ಇಬ್ಬರು ಪೊಲೀಸ್‌ ಕಾನ್‌ ಸ್ಟೇಬಲ್‌ ಗಳನ್ನು ಪಂಂಬೂರು ಉಪ ವಿಭಾಗದ ಉಪ ಆಯುಕ್ತ ಶ್ರೀಕಾಂತ್‌ ನೇತೃತ್ವದಲ್ಲಿ ವಿಚಾರಣೆ ಮುಂದುವರಿದೆ ಎಂದು ತಿಳಿದು ಬಂದಿದೆ.ಏನಿದು ಪೊಲೀಸ್‌ ಕ್ಲಿಯರನ್ಸ್ ಸರ್ಟಿಫಿಕೇಟ್ (ಪಿಸಿಸಿ)ಸಾಮಾನ್ಯವಾಗಿ ಸಾರ್ವಜನಿಕರು ತಮಗೆ ಖಾಸಗಿ ಕೆಲಸಕ್ಕೆ ಸೇರುವಾಗ ಪೊಲೀಸ್ ಠಾಣೆಯಿಂದ ಪೊಲೀಸ್‌ ಕ್ಲಿಯರನ್ಸ್ ಸರ್ಟಿಫಿಕೇಟ್ (ಪಿಸಿಸಿ) ಪಡೆದುಕೊಳ್ಳುತ್ತಾರೆ.

ಪಿಸಿಸಿ ಅಂದರೆ, ಒಬ್ಬ ವ್ಯಕ್ತಿಯ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ ಮತ್ತು ತನಿಖೆಯಲ್ಲಿ ಇರುವುದಿಲ್ಲ ಹಾಗೂ ಆತನ ವಿಳಾಸ ಮತ್ತು ಗುಣ ನಡತೆಯ ಬಗ್ಗೆ ಪೊಲೀಸ್ ಇಲಾಖೆಯಿಂದ ಪಡೆದುಕೊಳ್ಳುವ ಪ್ರಮಾಣ ಪತ್ರವಾಗಿದೆ. ಈ ಅರ್ಜಿಯನ್ನು ಸಾರ್ವಜನಿಕರು ಆನ್ ಲೈನ್ ಮೂಲಕ ಸಲ್ಲಿಸಿ ಅವರೇ ಪೊಲೀಸ್ ಠಾಣೆಯನ್ನು ಆಯ್ಕೆ ಆಡಿಕೊಳ್ಳುತ್ತಾರೆ. ಅವರ ಆಯ್ಕೆಯ ಪೊಲೀಸ್‌ ಠಾಣೆಯಲ್ಲಿ ಈ ಸರ್ಟಿಫಿಕೇಟ್‌ ವಿಚಾರಣೆಗೆ ಬಂದಿರುತ್ತದೆ. ಅದನ್ನು ಆಯಾ ಪೊಲೀಸ್‌ ಠಾಣೆಗಳ ಪೊಲೀಸ್‌ ನಿರೀಕ್ಷಕರು ಪರಿಶೀಲನೆಗೆ ಒಳಪಡಿಸುತ್ತಾರೆ. ಆಯಾ ಪೊಲೀಸ್‌ ಠಾಣೆಯ ಸಿಬ್ಬಂದಿ ಪ್ರಮಾಣಪತ್ರ ದಲ್ಲಿ ನಮೂದಿಸಲಾಗಿರುವ ವಿಳಾಸಕ್ಕೆ ತೆರಳಿ ವಿಚಾರಿಸಿ, ವಾಸ ಇರುವ ಬಗ್ಗೆ ಕ್ರಿಮಿನಲ್ ಪ್ರಕರಣ ಮಾಹಿತಿ ಮತ್ತು ಪೊಲೀಸ್‌ ಇಲಾಖೆಯ ವಿಶೇಷ ತಂತ್ರಾಂಶಗಳಲ್ಲಿ ಪರಿಶಿಲನೆ ಒಳಪಡಿಸಿ ಅರ್ಜಿದಾರ ಅರ್ಹನಾಗಿದ್ದರೆ ಪೊಲೀಸ್‌ ನಿರೀಕ್ಷಕರು ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್‌ಗಳನ್ನು ನೀಡುತ್ತಾರೆ ಅಥವಾ ಅರ್ಜಿದಾರ ಇದನ್ನು ಆನ್ ಲೈನ್ ನಲ್ಲೂ ಪಡೆದುಕೊಳ್ಳಬಹುದಾಗಿದೆ.

- Advertisement -

Related news

error: Content is protected !!