
ವಿಟ್ಲ: ಅಂತಾರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನದ ಅಂಗವಾಗಿ ವಿಟ್ಲ ಪೊಲೀಸ್ ಠಾಣೆಯ ವತಿಯಿಂದ ಗುರುವಾರ ಅಡ್ಯನಡ್ಕದಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ ಹಾಗೂ ಜಾಥಾ ಹಮ್ಮಿಕೊಳ್ಳಲಾಯಿತು.ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೇಪು ಗ್ರಾಮದ ಅಡ್ಯನಡ್ಕ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಅಡ್ಯನಡ್ಕ ಪೇಟೆಯಿಂದ ಕರ್ನಾಟಕ ಬ್ಯಾಂಕ್‌ವರೆಗೆ ಜಾಥಾ ನಡೆಸಲಾಯಿತು.
ಜಾಥಾದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಮಾದಕ ದ್ರವ್ಯಗಳ ವಿರುದ್ಧ ಘೋಷಣೆಗಳನ್ನು ಕೂಗಿ ಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಅಲ್ಲದೆ ಮಾದಕ ದ್ರವ್ಯಗಳಿಗೆ ಸಂಬಂಧಿಸಿದ ಕಾನೂನು ಅಂಶಗಳು ಹಾಗೂ ಅದರ ಪರಿಣಾಮಗಳ ಬಗ್ಗೆ ವಿವರಿಸಿ ಅರಿವು ಮೂಡಿಸಿದರು.ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮಾದಕ ವ್ಯಸನ ಮುಕ್ತ ಭಾರತ ನಿರ್ಮಾಣದಲ್ಲಿ ವಹಿಸಬೇಕಾದ ಪಾತ್ರದ ಕುರಿತು ತಿಳಿಸಲಾಯಿತು.
“ಡ್ರಗ್ಸ್ ಮುಕ್ತ ಭಾರತ”, “ಮಾದಕ ವಸ್ತುಗಳ ವಿರುದ್ಧ ಕರ್ನಾಟಕ” ಎಂಬ ಘೋಷಣೆಗಳೊಂದಿಗೆ ಯುವ ಸಮುದಾಯವನ್ನು ಮಾದಕ ವಸ್ತುಗಳಿಂದ ದೂರವಿಡುವ ಹಾಗೂ ಮಾದಕ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಕರೆ ನೀಡಲಾಯಿತು.ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.








