
ಹೊಸದಿಲ್ಲಿ: ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಆರ್ಥಿಕ ದುರ್ಬಲ ವರ್ಗ (ಇಡಬ್ಲ್ಯುಎಸ್) ಅಭ್ಯರ್ಥಿಗಳಿಗೆ ವಿಧಿಸುವ ಶುಲ್ಕವನ್ನು ಸರಕಾರಿ ಕಾಲೇಜುಗಳಲ್ಲಿ ವಿಧಿಸುವ ಶುಲ್ಕಕ್ಕೆ ಸಮಾನವಾಗಿ ನಿಗದಿಪಡಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.
ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಅತ್ಯಂತ ದುಬಾರಿ ಶುಲ್ಕಗಳು ಈ ಮೀಸಲಾತಿ ಕೋಟಾವನ್ನು ಅರ್ಹ ಅಭ್ಯರ್ಥಿಗಳಿಗೆ ಪ್ರಾಯೋಗಿಕವಾಗಿ ಅರ್ಥಹೀನವಾಗಿಸುತ್ತವೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ರಾಜ್ಯ ಶುಲ್ಕ ನಿಯಂತ್ರಣ ಸಮಿತಿ ನಿಗದಿಪಡಿಸಿದ ಶುಲ್ಕವನ್ನು ಸಿಂಧುಗೊಳಿಸಿ ರಾಜಸ್ಥಾನ ಉಚ್ಚ ನ್ಯಾಯಾಲಯ ನೀಡಿದ್ದ ಆದೇಶ ಎತ್ತಿ ಹಿಡಿದ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಜಾಯ್ಮಾಲ್ಯಾ ಬಾಗ್ಚಿ ಅವರಿದ್ದ ಪೀಠ, ಆರ್ಥಿಕ ದುರ್ಬಲ ವರ್ಗ (ಇಡಬ್ಲ್ಯುಎಸ್)ದ ಅಭ್ಯರ್ಥಿಯೊಬ್ಬರು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದೆ.
ರಾಜಸ್ಥಾನದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಬೋಧನಾ ಶುಲ್ಕ ವರ್ಷಕ್ಕೆ 18.8 ಲಕ್ಷ ರೂ.ಗಳಿಂದ 25 ಲಕ್ಷ ರೂ.ಗಳ ವರೆಗೆ ಇರುತ್ತದೆ ಎಂಬುದನ್ನು ಅರ್ಜಿದಾರರು ಎತ್ತಿ ತೋರಿಸಿದ್ದರು. ವರ್ಷಕ್ಕೆ 8 ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವ ಕುಟುಂಬಗಳು ಇಷ್ಟು ದೊಡ್ಡ ಮೊತ್ತವನ್ನು ಭರಿಸಲು ಸಾಧ್ಯವೇ ಇಲ್ಲ. ಇದು ವಾಸ್ತವದಲ್ಲಿ ಆರ್ಥಿಕ ದುರ್ಬಲ ವರ್ಗದ ಮೀಸಲಾತಿಯನ್ನು ನಿಷ್ಪ್ರಯೋಜಕಗೊಳಿಸುತ್ತದೆ ಎಂದು ಅವರು ವಾದಿಸಿದ್ದರು. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರಿ ಕಾಲೇಜುಗಳಂತೆ ರಿಯಾಯಿತಿ (ಸಬ್ಸಿಜಿ) ದರದಲ್ಲಿ ಕೋರ್ಸ್ಗಳನ್ನು ನೀಡುವಂತೆ ಬಲವಂತಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರಿ ಸಂಸ್ಥೆಗಳಷ್ಟೇ ಶುಲ್ಕ ವಿಧಿಸಬೇಕು ಎಂದು ನೀವು ಹೇಳುವಂತಿಲ್ಲ. ಅದು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯಿಸಿದೆ. ನ್ಯಾಯಮೂರ್ತಿ ನಾಗರತ್ನ ಅವರು ಇವೆರಡರ ನಡುವಿನ ಮೂಲಭೂತ ವ್ಯತ್ಯಾಸವನ್ನು ಒತ್ತಿ ಹೇಳಿದರು.
ಇವು ಸ್ವಯಂ ಹಣಕಾಸು ಸಂಸ್ಥೆಗಳಾಗಿವೆ. ಸರಕಾರಿ ಸಂಸ್ಥೆಗಳಿಗೆ ರಾಜ್ಯದಿಂದ ಅನುದಾನ ಸಿಗುತ್ತದೆ. ಇವೆರಡರ ನಡುವೆ ಪ್ರಮುಖ ವ್ಯತ್ಯಾಸವಿದೆ ಎಂದು ಅವರು ಹೇಳಿದರು. ಅಷ್ಟೇ ಅಲ್ಲದೆ, ಖಾಸಗಿ ಕಾಲೇಜುಗಳ ಶುಲ್ಕವನ್ನು ಕಡಿಮೆ ಮಾಡುವಂತೆ ಒತ್ತಾಯಿಸುವುದರಿಂದ ವೈದ್ಯಕೀಯ ಶಿಕ್ಷಣದಲ್ಲಿ ಅವುಗಳ ಭಾಗವಹಿಸುವಿಕೆಗೆ ನಿರುತ್ಸಾಹ ಉಂಟಾಗಬಹುದು ಎಂದು ಅವರು ತಿಳಿಸಿದರು. ಇದರಿಂದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಕ್ಕೆ ಖಾಸಗಿ ವೈದ್ಯಕೀಯ ಕಾಲೇಜುಗಳು ನೀಡುವ ನೆರವು ನಿಂತು ಹೋಗುತ್ತದೆ ಎಂದು ಅವರು ಗಮನ ಸೆಳೆದರು.
ಶುಲ್ಕ ಭರಿಸುವ ಸಾಮರ್ಥ್ಯದ ಕುರಿತಾದ ಪ್ರಶ್ನೆಗೆ, ಶುಲ್ಕ ಪಾವತಿಸಲು ಸಾಧ್ಯವಾಗದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಂಡುಕೊಳ್ಳುವಂತೆ ಪೀಠ ಸಲಹೆ ನೀಡಿತು.ಆರ್ಥಿಕ ದುರ್ಬಲ ವರ್ಗದ ಮೀಸಲಾತಿ ಪ್ರವೇಶದ ಹಂತದಲ್ಲಿ ಮಾತ್ರ ಅನ್ವಯಿಸುತ್ತದೆಯೇ ಹೊರತು, ಖಾಸಗಿ ಸಂಸ್ಥೆಗಳಲ್ಲಿ ಅಭ್ಯರ್ಥಿಗಳಿಗೆ ರಿಯಾಯಿತಿ ಅಥವಾ ವಿಭಿನ್ನ ಶುಲ್ಕವನ್ನು ಪಡೆಯುವ ಹಕ್ಕನ್ನು ನೀಡುವುದಿಲ್ಲ ಎಂದು ರಾಜಸ್ಥಾನ ಉಚ್ಚ ನ್ಯಾಯಾಲಯ ತೀರ್ಪು ನೀಡಿತ್ತು.








