
ನವದೆಹಲಿ, ಜು.1: ಇಂದಿನಿಂದ ದೇಶಾದ್ಯಂತ ಸಾರ್ವಜನಿಕರಿಗೆ ಸಂಬಂಧಿಸಿದ ಹಲವು ಪ್ರಮುಖ ಸೇವೆಗಳ ನಿಯಮಗಳಲ್ಲಿ ಬದಲಾವಣೆ ಜಾರಿಗೆ ಬಂದಿದೆ. ಪಾಸ್‌ಪೋರ್ಟ್ ಅರ್ಜಿ ಶುಲ್ಕ ಹೆಚ್ಚಳ, ಭಾರತೀಯ ರೈಲ್ವೆಯ ಮುಂಗಡ ಟಿಕೆಟ್ ಕಾಯ್ದಿರಿಸುವ ಅವಧಿಯಲ್ಲಿ ಪರಿಷ್ಕರಣೆ, ಲಗೇಜ್ ಸಾಗಾಣಿಕೆ ನಿಯಮಗಳಲ್ಲಿ ಕಟ್ಟುನಿಟ್ಟು ಹಾಗೂ ಬ್ಯಾಂಕಿಂಗ್ ಸೇವೆಗಳಲ್ಲಿನ ಹೊಸ ನಿಯಮಗಳು ಇಂದಿನಿಂದ ಅನ್ವಯವಾಗಲಿವೆ.
ಜೊತೆಗೆ, ಆಧಾರ್ ವಿವರಗಳನ್ನು ಉಚಿತವಾಗಿ ನವೀಕರಿಸಿಕೊಳ್ಳುವ ಗಡುವನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ.ಹೊಸ ದರಗಳ ಪ್ರಕಾರ, 10 ವರ್ಷಗಳ ಮಾನ್ಯತೆಯ 36 ಪುಟಗಳ ಪಾಸ್‌ಪೋರ್ಟ್ ಶುಲ್ಕ ₹1,500ರಿಂದ ₹2,500ಕ್ಕೆ ಹಾಗೂ 60 ಪುಟಗಳ ಪಾಸ್‌ಪೋರ್ಟ್ ಶುಲ್ಕ ₹2,000ರಿಂದ ₹3,500ಕ್ಕೆ ಹೆಚ್ಚಳವಾಗಿದೆ. ತತ್ಕಾಲ್ ಸೇವೆಯಡಿ 36 ಮತ್ತು 60 ಪುಟಗಳ ಪಾಸ್‌ಪೋರ್ಟ್‌ಗಳಿಗೆ ಕ್ರಮವಾಗಿ ₹15,000 ಹಾಗೂ ₹16,000 ಶುಲ್ಕ ನಿಗದಿಪಡಿಸಲಾಗಿದೆ.
ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಮತ್ತೊಂದು ಪ್ರಮುಖ ಬದಲಾವಣೆಯಾಗಿ, ಮುಂಗಡ ಟಿಕೆಟ್ ಕಾಯ್ದಿರಿಸುವ ಅವಧಿಯನ್ನು 120 ದಿನಗಳಿಂದ 60 ದಿನಗಳಿಗೆ ಇಳಿಸಲಾಗಿದೆ. ಇದರಂತೆ ಇಂದಿನಿಂದ ಪ್ರಯಾಣಿಕರು ಗರಿಷ್ಠ 60 ದಿನಗಳ ಮುಂಚಿತವಾಗಿ ಮಾತ್ರ ರೈಲು ಟಿಕೆಟ್ ಕಾಯ್ದಿರಿಸಬಹುದಾಗಿದೆ.ಇದೇ ವೇಳೆ, ರೈಲಿನಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಸಾಮಾನು ಸಾಗಿಸುವ ಪ್ರಯಾಣಿಕರಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದು. ನಿಯಮ ಉಲ್ಲಂಘಿಸಿದರೆ ₹2,500ರವರೆಗೆ ದಂಡ ವಿಧಿಸುವ ಅವಕಾಶವೂ ಇದ್ದು, ಪರಿಶೀಲನೆ ವೇಳೆ ನಿಯಮ ಮೀರಿ ಸಾಗಾಣಿಕೆ ಮಾಡಿರುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುತ್ತದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲೂ ಕೆಲವು ಹೊಸ ನಿಯಮಗಳು ಜಾರಿಗೆ ಬಂದಿದ್ದು, ವಿವಿಧ ಬ್ಯಾಂಕ್‌ಗಳು ತಮ್ಮ ಕ್ರೆಡಿಟ್ ಕಾರ್ಡ್ ಸೇವೆಗಳು, ಕನಿಷ್ಠ ಬಾಕಿ ಮೊತ್ತ, ಸೇವಾ ಶುಲ್ಕಗಳು ಹಾಗೂ ಇತರೆ ನಿಯಮಗಳಲ್ಲಿ ಪರಿಷ್ಕರಣೆ ಮಾಡಿವೆ. ಆದ್ದರಿಂದ ಗ್ರಾಹಕರು ತಮ್ಮ ಬ್ಯಾಂಕ್‌ನ ಅಧಿಕೃತ ಮಾಹಿತಿ ಪರಿಶೀಲಿಸಿ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳುವಂತೆ ಸೂಚಿಸಲಾಗಿದೆ.ಇದರ ಜೊತೆಗೆ, ಆಧಾರ್ ಕಾರ್ಡ್‌ನಲ್ಲಿರುವ ವಿವರಗಳನ್ನು ಉಚಿತವಾಗಿ ನವೀಕರಿಸಿಕೊಳ್ಳಲು ನೀಡಲಾಗಿದ್ದ ಗಡುವನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ.
ಈ ಅವಧಿಯೊಳಗೆ ಸಾರ್ವಜನಿಕರು ತಮ್ಮ ಆಧಾರ್ ವಿವರಗಳನ್ನು ಯಾವುದೇ ಶುಲ್ಕವಿಲ್ಲದೆ ನವೀಕರಿಸಿಕೊಳ್ಳಬಹುದಾಗಿದೆ. ದೇಶಾದ್ಯಂತ ಜಾರಿಗೆ ಬಂದಿರುವ ಈ ಹೊಸ ನಿಯಮಗಳು ಲಕ್ಷಾಂತರ ನಾಗರಿಕರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಸಂಬಂಧಿತ ಇಲಾಖೆಗಳ ಮಾರ್ಗಸೂಚಿಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.








