Friday, July 3, 2026
spot_imgspot_img
spot_imgspot_img

ತೆಲಂಗಾಣ: 50 ಎಕರೆ ಜಮೀನು, ಕೆಜಿಗಟ್ಟಲೆ ಚಿನ್ನ – ಡಿಎಸ್‌ಪಿಯ 200 ಕೋಟಿ ಸಾಮ್ರಾಜ್ಯ ಬಯಲಿಗೆಳೆದ ಎಸಿಬಿ

- Advertisement -
- Advertisement -

ಹೈದರಾಬಾದ್: ತೆಲಂಗಾಣದಲ್ಲಿ ಭ್ರಷ್ಟ ಅಧಿಕಾರಿಯೊಬ್ಬರ ಕೋಟಿ ಕೋಟಿ ಅಕ್ರಮ ಆಸ್ತಿಯ ವಿವರ ನೋಡಿ ಇಡೀ ಪೊಲೀಸ್ ಇಲಾಖೆಯೇ ದಂಗಾಗಿದೆ. ಭ್ರಷ್ಟಾಚಾರ ನಿಗ್ರಹ ದಳದ ದಾಳಿಯ ವೇಳೆ ತೆಲಂಗಾಣ, ಕರ್ನಾಟಕ ಸೇರಿದಂತೆ 50 ಎಕರೆ ಜಮೀನು, ಕೆಜಿಗಟ್ಟಲೆ ಚಿನ್ನ, 200 ಕೋಟಿ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ ಹೈದರಾಬಾದ್‌ನ ಪೊಲೀಸ್ ಕಂಪ್ಯೂಟರ್ ಸರ್ವೀಸಸ್ ವಿಭಾಗದ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಸಂಕೀರೆಡ್ಡಿ ಭೀಮ್ ರೆಡ್ಡಿ ಅವರ ಮನೆ, ಕಚೇರಿ, ಸ್ನೇಹಿತರು ಮತ್ತು ಬೇನಾಮಿಗಳಿಗೆ ಸೇರಿದ 16 ಸ್ಥಳಗಳಲ್ಲಿ ಜುಲೈ 2 ರಂದು ಏಕಕಾಲಕ್ಕೆ ಶೋಧ ಕಾರ್ಯ ನಡೆಸಲಾಗಿದೆ.

ತಮ್ಮ ಸೇವಾ ಅವಧಿಯಲ್ಲಿ ಭೀಮ್ ರೆಡ್ಡಿ ಅವರು ಭ್ರಷ್ಟಾಚಾರ ಹಾಗೂ ಕಾನೂನುಬಾಹಿರ ಮಾರ್ಗಗಳ ಮೂಲಕ ತಮ್ಮ ಅಧಿಕೃತ ಆದಾಯದ ಮೂಲಗಳಿಗಿಂತ ಹೆಚ್ಚಿನ ಆಸ್ತಿಯನ್ನು ಸಂಪಾದಿಸಿದ್ದಾರೆ ಎಂದು ಎಸಿಬಿ ತಿಳಿಸಿದೆ. ದಾಳಿಯಲ್ಲಿ ಅಕ್ರಮ ಆಸ್ತಿಯ ಪರ್ವತವೇ ಪತ್ತೆಯಾಗಿದ್ದು, ಭೀಮ್ ರೆಡ್ಡಿ ಅವರ ಆಸ್ತಿಯ ಒಟ್ಟು ಮಾರುಕಟ್ಟೆ ಮೌಲ್ಯ ಬರೋಬ್ಬರಿ 200 ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಹೈದರಾಬಾದ್‌ನ ಅತ್ಯಂತ ದುಬಾರಿ ಪ್ರದೇಶಗಳಾದ ಗಚಿಬೌಲಿ, ಮಣಿಕೊಂಡ, ಇಬ್ರಾಹಿಂಬಾಗ್ ಮತ್ತು ತೆಲ್ಲಾಪುರದಲ್ಲಿ ಐಷಾರಾಮಿ ವಿಲ್ಲಾಗಳು ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಹಲವು ಫ್ಲಾಟ್‌ಗಳನ್ನು ಹೊಂದಿದ್ದಾರೆ. ಇದರಲ್ಲಿ ಜಿ+2 ಅಂತಸ್ತಿನ ಪೆಂಟ್‌ಹೌಸ್ ಮತ್ತು 3,000 ಚದರ ಅಡಿಯ ವಾಣಿಜ್ಯ ಮಳಿಗೆಗಳೂ ಸೇರಿವೆ.

ಹೈದರಾಬಾದ್ ಸುತ್ತಮುತ್ತಲಿನ ಓಪನ್ ಪ್ಲಾಟ್‌ಗಳ ಜೊತೆಗೆ ಕರ್ನಾಟಕದಲ್ಲಿ 44 ಎಕರೆ ಮತ್ತು ಬೆಂಗಳೂರಿನ ದೇವನಹಳ್ಳಿಯಲ್ಲಿ 1 ಎಕರೆ ಸೇರಿದಂತೆ ಒಟ್ಟು 50 ಎಕರೆಗೂ ಅಧಿಕ ಕೃಷಿ ಭೂಮಿಯ ದಾಖಲೆಗಳು ಸಿಕ್ಕಿವೆ. ಶೋಧ ಕಾರ್ಯ ಪೂರ್ಣಗೊಂಡ ಬಳಿಕ ಡಿಎಸ್‌ಪಿ ಭೀಮ್ ರೆಡ್ಡಿ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಭ್ರಷ್ಟ ಅಧಿಕಾರಿಯೊಬ್ಬನ ಈ ಕೋಟಿ ಕೋಟಿ ರೂಪಾಯಿಗಳ ಕಪ್ಪು ಸಾಮ್ರಾಜ್ಯ ಹೈದರಾಬಾದ್ ಪೊಲೀಸ್ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.

ಶೋಧ ಕಾರ್ಯದ ವೇಳೆ ಮನೆಯಲ್ಲಿ ಅಂದಾಜು 3.60 ಲಕ್ಷ ನಗದು ಮತ್ತು ಅವರ ಬೆನಾಮಿ ಮನೆಯಲ್ಲಿ 40 ಲಕ್ಷ ರೂ. ನಗದು ಪತ್ತೆಯಾಗಿದೆ. ಇದರೊಂದಿಗೆ ಸುಮಾರು 2 ಕೆಜಿ ಚಿನ್ನದ ಆಭರಣಗಳು, 20 ಕೆಜಿ ಬೆಳ್ಳಿ ವಸ್ತುಗಳು ಮತ್ತು ವಿವಿಧ ಖಾತೆಗಳಲ್ಲಿದ್ದ ಒಟ್ಟು 19 ಲಕ್ಷದ 91 ಸಾವಿರ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಪತ್ತೆಹಚ್ಚಲಾಗಿದೆ. ದಾಖಲೆಗಳಲ್ಲಿ ನಮೂದಾಗಿರುವ ಈ ಎಲ್ಲಾ ಸ್ಥಿರ ಆಸ್ತಿಗಳ ಒಟ್ಟು ಮಾರುಕಟ್ಟೆ ಮೌಲ್ಯವು ದಾಖಲೆಗಳ ಮೌಲ್ಯಕ್ಕಿಂತ ಹಲವು ಪಟ್ಟು ಹೆಚ್ಚಾಗಿರಬಹುದು ಎಂದು ಎಸಿಬಿ ಹೇಳಿಕೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!