Monday, July 6, 2026
spot_imgspot_img
spot_imgspot_img

ಕುಂದಾಪುರ: ಮರವಂತೆಯಲ್ಲಿ ಗ್ಯಾಸ್ ಕಟ್ಟರ್ ಬಳಸಿ ಜ್ಯುವೆಲ್ಲರಿ ಶಾಪ್ ಕಳ್ಳತನ; ಬೆಳ್ಳಿ, ನಗದು ದೋಚಿದ ಕಳ್ಳರು

- Advertisement -
- Advertisement -

ಕುಂದಾಪುರ: ಆಭರಣ ಮಳಿಗೆಯೊಂದರ ಶಟರ್ ಅನ್ನು ಗ್ಯಾಸ್ ಕಟ್ಟರ್‌ನಿಂದ ಕತ್ತರಿಸಿ, ಅಂಗಡಿಯೊಳಗೆ ನುಗ್ಗಿದ ಕಳ್ಳರು ಬೆಳ್ಳಿ ಮತ್ತು ನಗದನ್ನು ದೋಚಿರುವ ಘಟನೆ ಮರವಂತೆಯ ರಾಷ್ಟ್ರೀಯ ಹೆದ್ದಾರಿ ಸಮೀಪ ಜುಲೈ 4 ರ ರಾತ್ರಿ ಮತ್ತು ಜುಲೈ 5 ರ ಬೆಳಗಿನ ಜಾವದ ನಡುವೆ ನಡೆದಿದೆ.

ಮರವಂತೆ ಗ್ರಾಮದ ಮಾರುತಿ ಕಾಂಪ್ಲೆಕ್ಸ್‌ನಲ್ಲಿರುವ ವಿಶ್ವನಾಥ ಪೂಜಾರಿ ಅವರಿಗೆ ಸೇರಿದ ಜ್ಯುವೆಲ್ಲರಿ ಅಂಗಡಿಯಲ್ಲಿ ಈ ಕಳ್ಳತನ ನಡೆದಿದೆ.

ಜುಲೈ 4 ರ ಶನಿವಾರ ರಾತ್ರಿ ಸುರಿದ ಭಾರಿ ಮಳೆಯನ್ನು ಕಳ್ಳರು ತಮ್ಮ ಕೃತ್ಯಕ್ಕೆ ಬಳಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಗ್ಯಾಸ್ ಕಟ್ಟರ್ ಬಳಸಿ ಅಂಗಡಿಯ ಶಟರ್ ಕತ್ತರಿಸಿ ಒಳನುಗ್ಗಿದ ಕಳ್ಳರು, ಸುಮಾರು 1.44 ಲಕ್ಷ ರೂ. ಮೌಲ್ಯದ 600 ಗ್ರಾಂ ಬೆಳ್ಳಿ ಮತ್ತು ಅಂಗಡಿಯ ಡ್ರಾಯರ್‌ನಲ್ಲಿದ್ದ 1,000 ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ. ಕಳ್ಳತನಕ್ಕೂ ಮುನ್ನ ಕಳ್ಳರು ಅಕ್ಕಪಕ್ಕದ ಅಂಗಡಿಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಿದ್ದಾರೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕುಂದಾಪುರ ಡಿವೈಎಸ್‌ಪಿ ಎಚ್.ಡಿ. ಕುಲಕರ್ಣಿ, ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್, ಗಂಗೊಳ್ಳಿ ಪಿಎಸ್‌ಐ ಪವನ್ ನಾಯಕ್, ಸುದರ್ಶನ್ ಹಾಗೂ ಸಿಬ್ಬಂದಿ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಮತ್ತು ತಾಂತ್ರಿಕ ತಂಡವು ಸ್ಥಳಕ್ಕೆ ಆಗಮಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಗ್ಯಾಸ್ ಕಟ್ಟರ್ ಬಳಸಿ ಶಟರ್ ಕತ್ತರಿಸಿರುವುದು, ಸಮೀಪದ ಸಿಸಿಟಿವಿಗಳನ್ನು ಹಾನಿಗೊಳಿಸಿರುವುದು ಹಾಗೂ ಭಾರಿ ಮಳೆಯ ಸಂದರ್ಭದಲ್ಲಿ ಕೃತ್ಯ ಎಸಗಿರುವುದು ನೋಡಿದರೆ, ಇದು ವೃತ್ತಿಪರ ಕಳ್ಳರ ಕೆಲಸ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!