
ಚೆನ್ನೈ: ಇಂದು ಕರೂರಿಗೆ ಭೇಟಿ ನೀಡಿದ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ಸಿ. ವಿಜಯ್, ಕಾಲ್ತುಳಿತದಲ್ಲಿ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದ 32 ಸಂತ್ರಸ್ತ ಕುಟುಂಬಗಳಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದರು.ಬೆಳಗ್ಗೆ ಸುಮಾರು 11 ಗಂಟೆಗೆ ಖಾಸಗಿ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮಕ್ಕಳ್ ಸಂತಿಪ್ಪು’ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡರು. ಈ ವೇಳೆ ಅವರು 32 ಸಂತ್ರಸ್ತ ಕುಟುಂಬಗಳಿಗೆ ಉದ್ಯೊಗ ನೇಮಕಾತಿ ಪತ್ರ ವಿತರಿಸಿದರು. ಇದರೊಂದಿಗೆ ಅವರು ಸುಮಾರು 1,700 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನೂ ಪ್ರಕಟಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಕರೂರು ಕಾಲ್ತುಳಿತ ಘಟನೆಯಿಂದ ಅತೀವ ನೋವಾಗಿದೆ. ಪೊಲೀಸರು ನಮಗೆ ಪರಿಸ್ಥಿತಿಯ ಕುರಿತು ಎಚ್ಚರಿಸಬಹುದಿತ್ತು. ಆದರೆ, ರಾಜಕೀಯ ಲಾಭ ಪಡೆಯಲು ಈ ಘಟನೆಯನ್ನು ಬಳಸಿಕೊಳ್ಳಲಾಯಿತು” ಎಂದು ಅವರು ದೂಷಿಸಿದರು.“ಕರೂರು ಕಾಲ್ತುಳಿತ ಘಟನೆಯಲ್ಲಿ ಸಂಭವಿಸಿದ ಸಾವುಗಳಿಂದ ನನಗೆ ತೀವ್ರ ದುಃಖವಾಯಿತು. ನಾವು ಈ ಘಟನೆಯಲ್ಲಿ ನಮ್ಮ ಸಹೋದರಿಯರ ಮಕ್ಕಳನ್ನು ಕಳೆದುಕೊಂಡೆವು” ಎಂದು ಅವರು ಸಂತಾಪ ವ್ಯಕ್ತಪಡಿಸಿದರು.“ಜನದಟ್ಟಣೆ ವಿಪರೀತವಾಗುತ್ತಿದೆ ಹಾಗೂ ಅದನ್ನು ನಿಯಂತ್ರಿಸಲು ಅಸಾಧ್ಯ ಎಂದು ಪೊಲೀಸರು ನಮ್ಮನ್ನು ಎಚ್ಚರಿಸಬಹುದಿತ್ತು. ಸಭೆಯನ್ನು ರದ್ದುಗೊಳಿಸುವ ಎಲ್ಲ ಅಧಿಕಾರ ಪೊಲೀಸರಿಗಿತ್ತು. ಹಾಗೆ ಮಾಡುವ ಬದಲು, ಪೊಲೀಸರು ಹೆದ್ದಾರಿಯಲ್ಲಿ ನಮಗೆ ಬೆಂಗಾವಲು ನೀಡಿದರು” ಎಂದು ಅವರು ದೂರಿದರು.
“ತಮಿಳ ವೆಟ್ರಿ ಕಳಗಂ ಪಕ್ಷದ ಪರವಾಗಿ ಕರೂರು ಕಾಲ್ತುಳಿತ ಸಂತ್ರಸ್ತರ ಸ್ಮರಣಾರ್ಥ ಸ್ಮಾರಕವೊಂದನ್ನು ಸ್ಥಾಪಿಸಲಾಗುವುದು” ಎಂದೂ ಅವರು ಪ್ರಕಟಿಸಿದರು.ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಮುಖ್ಯಮಂತ್ರಿ ವಿಜಯ್ ಕರೂರಿಗೆ ನೀಡುತ್ತಿರುವ ಪ್ರಥಮ ಅಧಿಕೃತ ಭೇಟಿ ಇದಾಗಿದೆ.ಕಳೆದ ವರ್ಷದ ಸೆಪ್ಟೆಂಬರ್ 27ರಂದು ಕರೂರಿನಲ್ಲಿ ಆಯೋಜನೆಗೊಂಡಿದ್ದ ಟಿವಿಕೆ ರ್ಯಾಲಿಯ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟಿದ್ದರು. ಇಂದು ಸಂತ್ರಸ್ತ ಕುಟುಂಬಗಳನ್ನು ಭೇಟಿಯಾದ ವಿಜಯ್, ಅವರಿಗೆ ಸಾಂತ್ವನ ಹೇಳಿದರು.







