Sunday, July 12, 2026
spot_imgspot_img
spot_imgspot_img

ಬಹುಕೋಟಿ ಅಂಗಾಂಗ ಕಳ್ಳಸಾಗಣೆ ಪ್ರಕರಣ: EDಯಿಂದ ಕೇರಳಂನ ಪ್ರಮುಖ ಖಾಸಗಿ ಆಸ್ಪತ್ರೆಗಳ ವೈದ್ಯರ ವಿಚಾರಣೆ

- Advertisement -
- Advertisement -

ತಿರುವನಂತಪುರ: ಕೇರಳಂನಲ್ಲಿ ಬೆಳಕಿಗೆ ಬಂದಿರುವ ಬಹುಕೋಟಿ ಮೌಲ್ಯದ ಅಂಗಾಂಗ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ED) ವಿಸ್ತರಿಸಿದೆ. ಇದರ ಭಾಗವಾಗಿ ರಾಜ್ಯದ ಪ್ರಮುಖ ಖಾಸಗಿ ಆಸ್ಪತ್ರೆಗಳ ಹಿರಿಯ ವೈದ್ಯರನ್ನು ಸಮನ್ಸ್ ನೀಡಿ ವಿಚಾರಣೆ ನಡೆಸುತ್ತಿದೆ.ಸಮನ್ಸ್ ಪಡೆದಿರುವ ವೈದ್ಯರು ಆಸ್ಪತ್ರೆಗಳ ಆಂತರಿಕ ಅಂಗಾಂಗ ಕಸಿ ಮೌಲ್ಯಮಾಪನ ಸಮಿತಿಗಳ ಸದಸ್ಯರಾಗಿದ್ದು, ಅಂಗಾಂಗ ಕಸಿ ಪ್ರಕರಣಗಳ ವೈದ್ಯಕೀಯ, ನೈತಿಕ ಹಾಗೂ ಕಾನೂನು ಅಂಶಗಳನ್ನು ಪರಿಶೀಲಿಸಿ, ಅಂತಿಮ ಅನುಮೋದನೆಗಾಗಿ ಜಿಲ್ಲಾ ಅಧಿಕಾರ ಸಮಿತಿಗಳಿಗೆ ಶಿಫಾರಸು ಮಾಡುವ ಹೊಣೆಗಾರಿಕೆ ಹೊಂದಿದ್ದಾರೆ.

ತನಿಖೆಯ ಭಾಗವಾಗಿ, ಅಕ್ರಮ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳಿಗೆ ತ್ವರಿತ ಅನುಮೋದನೆ ನೀಡಲು ಅಕ್ರಮ ಕಮಿಷನ್ ಪಡೆದಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ಕೊಚ್ಚಿಯ ಲೇಕ್‌ಶೋ‌ರ್ ಆಸ್ಪತ್ರೆಯ ಹಿರಿಯ ಸಲಹೆಗಾರ ಡಾ. ಮುಹಮ್ಮದ್ ಇಟ್ಬಾಲ್ ಅವರನ್ನು ಶನಿವಾರ ED ಅಧಿಕಾರಿಗಳು ವಿಚಾರಣೆ ನಡೆಸಿದರು.ಇದಕ್ಕೂ ಒಂದು ದಿನ ಮೊದಲು ಇದೇ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಕೆ. ಅಬ್ದುಲ್ಲಾ ಅವರನ್ನೂ ED ಅಧಿಕಾರಿಗಳು ಪ್ರಶ್ನಿಸಿದ್ದರು ಎಂದು ವರದಿಯಾಗಿದೆ.ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ ಕಾಸರಗೋಡು ಮೂಲದ ಮುಹಮ್ಮದ್ ನಜೀಬ್‌ ಕಲ್ಲತ್ರಾ ಅವರನ್ನು ಅಂಗಾಂಗ ಕಳ್ಳಸಾಗಣೆ ಆರೋಪದ ಮೇಲೆ ಕೇರಳಂ ಪೊಲೀಸರು ಬಂಧಿಸಿದ ಬಳಿಕ ಪ್ರಕರಣದ ತನಿಖೆ ತೀವ್ರಗೊಂಡಿದೆ. ಈ ವರ್ಷದ ಮೇ ತಿಂಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ಮಾಹಿತಿ ವರದಿ (ಎಫ್‌ಐಆ‌ರ್) ದಾಖಲಾಗಿದ್ದು, ಅದರ ಆಧಾರದ ಮೇಲೆ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿ ED ತನಿಖೆ ಆರಂಭಿಸಿದೆ.

ತನಿಖೆಯಲ್ಲಿ ವೈದ್ಯಕೀಯ ಪ್ರಮಾಣಪತ್ರಗಳನ್ನು ನಕಲಿ ಮಾಡಿರುವುದು, ದಾನಿ ಮತ್ತು ಅಂಗಾಂಗ ಸ್ವೀಕರಿಸುವವರ ನಡುವೆ ಮಾನವೀಯ ಕಾರಣಗಳಿಂದ ಅಂಗಾಂಗ ದಾನ ಮಾಡುತ್ತಿರುವ ಸಂಬಂಧವಿದೆ ಎಂಬಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವುದು ಹಾಗೂ ಪೊಲೀಸರ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನೂ (NOC) ನಕಲಿ ಮಾಡಿರುವ ಆರೋಪಗಳು ಕೇಳಿಬಂದಿವೆ.

ಅಂಗಾಂಗ ಕಸಿ ನಿಯಮಗಳ ಪ್ರಕಾರ, ಸ್ವೀಕರಿಸುವವರಿಗೆ ಸಂಬಂಧವಿಲ್ಲದ ದಾನಿಯಿಂದ ಅಂಗಾಂಗ ಪಡೆಯಬೇಕಾದರೆ ಸರ್ಕಾರಿ ಮಾನ್ಯತೆ ಪಡೆದ ಜಿಲ್ಲಾ ಅಧಿಕಾರ ಸಮಿತಿಯ ಅನುಮತಿ ಕಡ್ಡಾಯ. ಸಮಿತಿಯ ಅನುಮೋದನೆ ಮತ್ತು ಪೂರಕ ದಾಖಲೆಗಳು ಲಭ್ಯವಾದ ಬಳಿಕವೇ ಆಸ್ಪತ್ರೆಗಳು ಕಸಿ ಪ್ರಕ್ರಿಯೆ ಮುಂದುವರಿಸಬಹುದು.ಈ ದಂಧೆಯ ಮೂಲಕ ವಿವಿಧ ಆಸ್ಪತ್ರೆಗಳಲ್ಲಿ ಸುಮಾರು 20 ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗಳು ನಡೆದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ದಾನಿಗಳಿಗೆ ಅಲ್ಪ ಮೊತ್ತ ಮಾತ್ರ ನೀಡಿ, ಮಧ್ಯವರ್ತಿಗಳು ಹೆಚ್ಚಿನ ಹಣವನ್ನು ತಮ್ಮ ವಶಪಡಿಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಮತ್ತೊಂದೆಡೆ, ಅಂಗಾಂಗ ಸ್ವೀಕರಿಸಿದವರಿಂದ ಒಂದೊಂದು ಕಸಿಗೆ 20 ಲಕ್ಷದಿಂದ 25 ಲಕ್ಷ ರೂ.ವರೆಗೆ ವಸೂಲಿ ಮಾಡಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

- Advertisement -

Related news

error: Content is protected !!