



ಬೆಂಗಳೂರು: ರಾಜಧಾನಿಯ ಹೊಯ್ಸಳ ನಗರದಲ್ಲಿ ತಡರಾತ್ರಿ ಯುವತಿಯರ ಒಳ ಉಡುಪುಗಳನ್ನು ಕದ್ದು ವಿಕೃತಿ ಮೆರೆಯುತ್ತಿದ್ದ ಆರೋಪಿಯನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ
ಸದ್ದಾಂ ಹುಸೇನ್ ಬಂಧಿತ ಆರೋಪಿ. ಕಳೆದ ಆರು ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿದ್ದ ಈ ವಿಚಿತ್ರ ಕಳ್ಳತನದಿಂದ ಬೇಸತ್ತಿದ್ದ ಯುವತಿಯರು, ತಾವೇ ಸ್ವತಃ ಹಿಡನ್ ಕ್ಯಾಮೆರಾ ಇಟ್ಟು ಈ ವಿಕೃತ ಕಾಮಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಯ್ಸಳ ನಗರದ ಮನೆಯೊಂದರ ಬಾಲ್ಕನಿ/ವರಾಂಡದಲ್ಲಿ ಒಣಹಾಕುತ್ತಿದ್ದ ಯುವತಿಯರ ಒಳ ಉಡುಪುಗಳು ಕಳೆದ ಆರು ತಿಂಗಳಿನಿಂದ ನಿಗೂಢವಾಗಿ ಮಾಯವಾಗುತ್ತಿದ್ದವು. ಇದಕ್ಕಿಂತಲೂ ವಿಚಿತ್ರವೆಂದರೆ ಕಳ್ಳತನ ಮಾಡಿದ ಮರುದಿನವೇ ಆತ ಹಳೆಯ ಬಟ್ಟೆಗಳನ್ನು ತಂದು ಅಲ್ಲೇ ಹಾಕಿ, ಮತ್ತೆ ಹೊಸ ಬಟ್ಟೆಗಳನ್ನು ಕದ್ದು ಎಸ್ಕೇಪ್ ಆಗುತ್ತಿದ್ದ.
ಇದರಿಂದ ಆತಂಕಗೊಂಡ ಯುವತಿಯರು ಈ ವಿಕೃತನನ್ನು ಹೇಗಾದರೂ ಮಾಡಿ ಪತ್ತೆಹಚ್ಚಲೇಬೇಕೆಂದು ಪಣತೊಟ್ಟು, ಜುಲೈ 1ರಂದು ಬಟ್ಟೆ ಒಣಹಾಕುವ ಜಾಗದಲ್ಲಿ ರಹಸ್ಯವಾಗಿ ಹಿಡನ್ ಕ್ಯಾಮೆರಾವನ್ನು ಅಳವಡಿಸಿದ್ದರು.
ಜುಲೈ 2ರ ಬೆಳಗಿನ ಜಾವ ಸುಮಾರು 3 ಗಂಟೆಯ ಹೊತ್ತಿಗೆ ಎಂದಿನಂತೆ ಅಲ್ಲಿಗೆ ಬಂದ ಆರೋಪಿ ಸದ್ದಾಂ ಹುಸೇನ್, ಯುವತಿಯರ ಒಳ ಉಡುಪುಗಳನ್ನು ಧರಿಸಿ ತೀರ ವಿಚಿತ್ರವಾಗಿ ವರ್ತಿಸಿದ್ದಾನೆ. ಈತನ ಇಡೀ ವಿಕೃತ ನಡವಳಿಕೆ ಯುವತಿಯರು ಇಟ್ಟಿದ್ದ ಹಿಡನ್ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಕ್ಯಾಮೆರಾದಲ್ಲಿದ್ದ ಭದ್ರತಾ ದೃಶ್ಯಾವಳಿಗಳನ್ನು ಆಧಾರವಾಗಿಟ್ಟುಕೊಂಡು ಯುವತಿಯರು ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಸದ್ದಾಂ ಹುಸೇನ್‌ನನ್ನು ವಶಕ್ಕೆ ಪಡೆದು ಆತನ ಈ ವಿಕೃತ ಚಾಳಿಯ ಹಿಂದಿನ ಉದ್ದೇಶದ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.








