


ಉಡುಪಿ: ಕಟಪಾಡಿ ಸಮೀಪದ ಅಚ್ಚಡ್‌ನಲ್ಲಿ ಶನಿವಾರ(ಜು.18) ಮುಂಜಾನೆ ಬೀದಿ ನಾಯಿಗಳ ಗುಂಪೊಂದು ಮೇಕೆ ಕೊಟ್ಟಿಗೆಗೆ ನುಗ್ಗಿ ಎರಡು ಮರಿಗಳು ಸೇರಿದಂತೆ ಐದು ಮೇಕೆಗಳನ್ನು ಕಚ್ಚಿ ಕೊಂದಿರುವ ಘಟನೆ ನಡೆದಿದೆ.
ಈ ಘಟನೆಯು ನಿವೃತ್ತ ಶಿಕ್ಷಕ ವಿಠ್ಠಲ್ ಶೇರಿಗಾರ್ ಅವರ ಮನೆಯಲ್ಲಿ ನಡೆದಿದೆ. ಅವರ ಪುತ್ರ ಪ್ರಶಾಂತ್ ಶೇರಿಗಾರ್ ಮೇಕೆ ಸಾಕಾಣಿಕೆ ನಡೆಸುತ್ತಿದ್ದು, ಮುಂಜಾನೆ ವೇಳೆಗೆ ಬೀದಿ ನಾಯಿಗಳು ಕೊಟ್ಟಿಗೆಗೆ ನುಗ್ಗಿ ಮೇಕೆಗಳ ಮೇಲೆ ದಾಳಿ ನಡೆಸಿವೆ. ದಾಳಿಯಲ್ಲಿ ಎರಡು ಮರಿ ಮೇಕೆಗಳು ಸೇರಿದಂತೆ ಐದು ಮೇಕೆಗಳು ಸಾವನ್ನಪ್ಪಿದ್ದು, ಕುಟುಂಬಕ್ಕೆ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಅಚ್ಚಡ್ ಮಲೆ ಜುಮಾದಿ ದೈವಸ್ಥಾನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ಬೀದಿ ನಾಯಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ನಾಯಿಗಳು ಜಾನುವಾರುಗಳ ಮೇಲೆ ನಿರಂತರ ದಾಳಿ ನಡೆಸುತ್ತಿರುವುದಲ್ಲದೆ, ಸಾರ್ವಜನಿಕರಿಗೂ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶಾಲೆಗೆ ಹೋಗುವ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದು, ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಮಕ್ಕಳನ್ನು ಒಂಟಿಯಾಗಿ ಕಳುಹಿಸಲು ಭಯವಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ, ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಸ್ಥಳೀಯ ಆಡಳಿತ ಮತ್ತು ಸಂಬಂಧಿತ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಬೇಕು, ನಾಯಿಗಳನ್ನು ಹಿಡಿಯುವ ಹಾಗೂ ಅವುಗಳ ಸಂಖ್ಯೆಯನ್ನು ನಿಯಂತ್ರಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸ್ಥಳೀಯರು, ಜಾನುವಾರುಗಳ ರಕ್ಷಣೆ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ಅನಾಹುತ ಸಂಭವಿಸುವ ಮುನ್ನವೇ ಅಧಿಕಾರಿಗಳು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವುದಾಗಿ ತಿಳಿದುಬಂದಿದೆ.







