


ಬೆಂಗಳೂರು: ಐಸಿಸ್ಗೆ (ISIS) ಯುವಕರನ್ನು ಸೇರಿಸಲು ಹಣ ಸಂದಾಯ ಮಾಡಿದ ಆರೋಪದ ಮೇಲೆ ನಗರದ 8 ಕಡೆಗಳಲ್ಲಿ ಮುಸ್ಲಿಂ ಸಂಘಟನೆಗಳ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಪ್ರೇಜರ್ ಟೌನ್, ಗುರಪ್ಪನಪಾಳ್ಯ, ಬಿಸ್ಮಿಲ್ಲಾ ನಗರ, ಕಮ್ಮನಹಳ್ಳಿಯಲ್ಲಿ ಇಡಿ (ಜಾರಿ ನಿರ್ದೇಶನಾಲಯ) ದಾಳಿ ನಡೆಸಿದೆ. ಇಕ್ರಾ ವೆಲ್ಫೇರ್ ಟ್ರಸ್ಟ್, ಗೈಡೆನ್ಸ್ ಫಾರ್ ಮ್ಯಾನ್ಕೈಂಡ್ ಟ್ರಸ್ಟ್ ಸಂಬಂಧಿಸಿದ ಹಣ ಉಗ್ರ ಚಟುವಟಿಕೆಗಳಿಗೆ ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಎನ್ಐಎ ಎಫ್ಐಆರ್ ಆಧಾರದ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಎನ್ಐಎ ಮೊಹಮದ್ ತಾಖೀರ್, ಝೋಯೇಬ್ ಮನ್ನಾ, ಇರ್ಫಾನ್ ನಾಸಿರ್, ಮೊಹಮದ್ ಸಾಹಿಬ್, ಅಹಮದ್ ಅಬ್ದುಲ್ ಕೇಡರ್ನನ್ನು ಬಂಧಿಸಿತ್ತು. ಈ ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಆರೋಪಿಗಳು ಐಸಿಸ್ಗೆ ಸೇರಲು ಮತ್ತು ಸಿರಿಯಾ ಸರ್ಕಾರದ ವಿರುದ್ಧ ಹೋರಾಡಲು ಟರ್ಕಿಯ ಮೂಲಕ ತೆರಳಲು ಯುವಕರಿಗೆ ಸಹಾಯ ಮಾಡಿದ್ದಾರೆ. ಅಲ್ಲದೇ ಮುಸ್ಲಿಮರಲ್ಲದವರ ವಿರುದ್ಧ ದ್ವೇಷ ಹರಡಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಗಳು ದುಬೈ ಮತ್ತು ಲಂಡನ್ಲ್ಲಿ ಆಸ್ತಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಇ.ಡಿ ದಾಳಿ ವೇಳೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.








