Friday, July 31, 2026
spot_imgspot_img
spot_imgspot_img

11 ವರ್ಷದ ಬಾಲಕನನ್ನು ಪೋಷಕರ ಮಡಿಲಿಗೆ ಸೇರಿಸಿದ ಕಾರ್ಕಳ ಮಹಿಳಾ ಪೊಲೀಸ್; ಕಾರ್ಯಕ್ಕೆ ಎಸ್‌ಪಿ ಶ್ಲಾಘನೆ

- Advertisement -
- Advertisement -

ಉಡುಪಿ: ಉಡುಪಿ ರೈಲ್ವೆ ನಿಲ್ದಾಣದಲ್ಲಿ ಕಳೆದ ಜನವರಿಯಲ್ಲಿ ಒಂಟಿಯಾಗಿ ಪತ್ತೆಯಾಗಿದ್ದ ಪಶ್ಚಿಮ ಬಂಗಾಳ ಮೂಲದ 11 ವರ್ಷದ ಬಾಲಕನನ್ನು ಕೊನೆಗೂ ಆತನ ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿ ಸಂಪಾ ಶೆಟ್ಟಿ ಅವರ ಸಮಯೋಚಿತ ಕಾರ್ಯಾಚರಣೆ ಹಾಗೂ ನಿರಂತರ ಪ್ರಯತ್ನದಿಂದ ಬಾಲಕ ತನ್ನ ಕುಟುಂಬವನ್ನು ಸೇರಿದ್ದಾನೆ.

ಜನವರಿ 2026ರಲ್ಲಿ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಬಾಲಕ ಒಂಟಿಯಾಗಿ ಪತ್ತೆಯಾಗಿದ್ದ. ಪೋಷಕರ ಹೆಸರು ಹಾಗೂ ವಿಳಾಸವನ್ನು ತಿಳಿಸಲು ಸಾಧ್ಯವಾಗದ ಕಾರಣ ಆತನನ್ನು ಉಡುಪಿಯ ಕುಂಜಿಬೆಟ್ಟುವಿನ ಬಾಲಕರ ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿತ್ತು.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಾಲಕನ ಪೋಷಕರನ್ನು ಪತ್ತೆಹಚ್ಚುವಂತೆ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಉಡುಪಿ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಗಂಗರಾಂಪುರ ಪೊಲೀಸ್ ಠಾಣೆಯ ಅಧಿಕಾರಿಗಳ ಸಹಕಾರದೊಂದಿಗೆ ತನಿಖೆ ನಡೆಸಲಾಯಿತು.ತನಿಖೆಯ ವೇಳೆ ಕಾರ್ಕಳ ನಗರ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿ ಸಂಪಾ ಶೆಟ್ಟಿ ಅವರು ಬಾಲಕನ ತಾಯಿ ಸಾಧನಾ ಮಂಡಲ್ ಅವರು ಮಹಾರಾಷ್ಟ್ರದ ಕಲ್ಯಾಣ್ ಜಿಲ್ಲೆಯ ಟಿಟ್ಬಾಲ ಪ್ರದೇಶದಲ್ಲಿರುವ ಮಾಹಿತಿ ಸಂಗ್ರಹಿಸಿ ಅವರನ್ನು ಸಂಪರ್ಕಿಸಿದರು. ಬಳಿಕ ಬಾಲಕ ಸುರಕ್ಷಿತವಾಗಿರುವ ವಿಷಯವನ್ನು ತಿಳಿಸಿದರು.

ಇದಾದ ನಂತರ ಬಾಲಕನ ಪೋಷಕರು ಜು.30ರಂದು ಉಡುಪಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗಿ ಮಗನನ್ನು ತಮ್ಮ ವಶಕ್ಕೆ ಪಡೆದರು. ನಂತರ ಮಗನೊಂದಿಗೆ ಸ್ವಗ್ರಾಮಕ್ಕೆ ತೆರಳಿದರು.ಬಾಲಕನನ್ನು ಸುರಕ್ಷಿತವಾಗಿ ಪೋಷಕರೊಂದಿಗೆ ಸೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಕಾರ್ಕಳ ನಗರ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿ ಸಂಪಾ ಶೆಟ್ಟಿ ಅವರ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.

- Advertisement -

Related news

error: Content is protected !!