


ಸುಳ್ಯ: ಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ಮೆಸ್ಕಾಂ ಸಹಾಯಕ ಇಂಜಿನಿಯರ್ ಮೇಲೆ ಹಲ್ಲೆ ಹಾಗೂ ಮೊಬೈಲ್ ಪುಡಿ ಮಾಡಿದ ಆರೋಪ ಕೇಳಿಬಂದ ಘಟನೆ ಸುಳ್ಯದಲ್ಲಿ ನಡೆದಿದೆ.
ದೂರುದಾರರಾದ ಸುಳ್ಯ ನಿವಾಸಿ ರಾಘವ ಶೆಟ್ಟಿ ಅವರು ಆಗಸ್ಟ್ 2 ರಂದು ಸುಳ್ಯ ಮೆಸ್ಕಾಂ ಕಂಟ್ರೋಲ್ ರೂಂನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಮೆಸ್ಕಾಂ ಕಚೇರಿ ಸುಳ್ಯದ ಸಹಾಯಕ ಇಂಜಿನಿಯರ್ ಸುಪ್ರೀತ್ ಅವರು ಅಲ್ಲಿಗೆ ಬಂದು ಕೆಲಸದ ವಿಚಾರದಲ್ಲಿ ರಾಘವ ಶೆಟ್ಟಿ ಅವರೊಂದಿಗೆ ತಕರಾರು ತೆಗೆದಿದ್ದಾರೆ.ಆರೋಪದ ಪ್ರಕಾರ, ಸುಪ್ರೀತ್ ಅವರು ರಾಘವ ಶೆಟ್ಟಿ ಅವರ ಮೊಬೈಲ್ ಕಿತ್ತು ನೆಲಕ್ಕೆ ಬಡಿದು ಪುಡಿ ಮಾಡಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ರಾಘವ ಶೆಟ್ಟಿ ಅವರು ಸುಳ್ಯ ಠಾಣೆಗೆ ದೂರು ನೀಡಿದ್ದು, NC: 79/SUL/NCR/2026 ರಂತೆ ಪ್ರಕರಣ ದಾಖಲಾಗಿತ್ತು ಠಾಣೆಗೆ ದೂರುದಾರರು ಹಾಗೂ ಎದುರಾಳಿಯನ್ನು ಕರೆಸಿ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಇಬ್ಬರೂ ಪರಸ್ಪರ ಮಾತುಕತೆಯ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.








