ಕಾಸರಗೋಡು: ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಸ್ವಾತಂತ್ರ್ಯ ರಸಪ್ರಶ್ನೆ’ಯಲ್ಲಿ ವಿವಾದಾತ್ಮಕ ಪ್ರಶ್ನೆ ಸೇರಿಸಿದ ಆರೋಪದ ಹಿನ್ನೆಲೆಯಲ್ಲಿ ಪಳ್ಳತ್ತಡ್ಕ ಎ.ಯು.ಪಿ. ಶಾಲೆಯ ಶಿಕ್ಷಕ ಗುರುಪ್ರಸಾದ್ ಅವರನ್ನು ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಸೇವೆಯಿಂದ ಅಮಾನತುಗೊಳಿಸಿದ್ದಾರೆ.ಕುಂಬಳೆ ಹಾಗೂ ಮಂಜೇಶ್ವರ ಉಪಜಿಲ್ಲೆಗಳ ಶಾಲೆಗಳಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಸಮಾಜ ವಿಜ್ಞಾನ ಕೂಟದ ವತಿಯಿಂದ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು. ಒಟ್ಟು 15 ಪ್ರಶ್ನೆಗಳ ಪೈಕಿ 5ನೇ ಪ್ರಶ್ನೆ ವಿವಾದಕ್ಕೆ ಕಾರಣವಾಗಿತ್ತು.“ಬ್ರಿಟಿಷರಿಂದ ಅತ್ಯಂತ ಕಠಿಣ ಶಿಕ್ಷೆಗೆ ಒಳಗಾದ ಸ್ವಾತಂತ್ರ್ಯ ಹೋರಾಟಗಾರ ಯಾರು?” ಎಂಬ ಪ್ರಶ್ನೆಗೆ ವಿ.ಡಿ. ಸಾವರ್ಕರ್ ಅವರ ಹೆಸರನ್ನು ಅಧಿಕೃತ ಉತ್ತರವಾಗಿ ನೀಡಲಾಗಿತ್ತು. ಇದನ್ನು ಇತಿಹಾಸವನ್ನು ತಿರುಚುವ ಪ್ರಯತ್ನ ಹಾಗೂ ರಾಜಕೀಯ ಪ್ರೇರಿತ ಪ್ರಶ್ನೆ ಎಂದು ಆರೋಪಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ಪ್ರತಿಭಟನೆ ನಡೆಸಿದ್ದರು.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಸಚಿವರು ತನಿಖೆಗೆ ಆದೇಶಿಸಿದ್ದರು. ಕಾಸರಗೋಡು ಉಪ ಶಿಕ್ಷಣ ನಿರ್ದೇಶಕರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಶಿಕ್ಷಕ ಗುರುಪ್ರಸಾದ್ ನೇತೃತ್ವದ ತಂಡವೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಿರುವುದು ದೃಢಪಟ್ಟಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.ಅಲ್ಲದೆ, ಈ ರಸಪ್ರಶ್ನೆ ಕಾರ್ಯಕ್ರಮ ಇಲಾಖೆಯ ಅಧಿಕೃತ ಶೈಕ್ಷಣಿಕ ಕ್ಯಾಲೆಂಡರ್ನಲ್ಲಿ ಇರಲಿಲ್ಲ ಮತ್ತು ಕಾರ್ಯಕ್ರಮಕ್ಕೆ ಯಾವುದೇ ಪೂರ್ವಾನುಮತಿ ಪಡೆಯಲಾಗಿರಲಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.ಶಿಕ್ಷ
ಕ ಗುರುಪ್ರಸಾದ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದ್ದು, ಅವರ ವಿರುದ್ಧ ಕಟ್ಟುನಿಟ್ಟಿನ ಇಲಾಖಾ ಶಿಸ್ತು ಕ್ರಮ ಕೈಗೊಳ್ಳುವಂತೆ ಶಾಲಾ ವ್ಯವಸ್ಥಾಪಕ ಮಂಡಳಿಗೆ ಸೂಚಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಉನ್ನತ ಮಟ್ಟದ ತನಿಖೆ ಮುಂದುವರಿದಿದೆ.








