Monday, August 10, 2026
spot_imgspot_img
spot_imgspot_img

NRC ಗುರುತಿನ ಚೀಟಿ ನೀಡುವಂತೆ ಅರ್ಜಿ: ಕೇಂದ್ರ, ಅಸ್ಸಾಂ ಸರಕಾರಕ್ಕೆ ಉತ್ತರಿಸಲು ಸುಪ್ರೀಂ ಸೂಚನೆ

- Advertisement -
- Advertisement -

ಹೊಸದಿಲ್ಲಿ, ಆ.10: ಅಸ್ಸಾಂನಲ್ಲಿ 2019ರಲ್ಲಿ ಪ್ರಕಟಿಸಲಾದ ರಾಷ್ಟ್ರೀಯ ನಾಗರಿಕರ ನೋಂದಣಿ (NRC) ಅಂತಿಮ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರುವವರಿಗೆ NRC ಗುರುತಿನ ಚೀಟಿ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳಿಗೆ ಉತ್ತರಿಸುವಂತೆ ಕೇಂದ್ರ ಮತ್ತು ಅಸ್ಸಾಂ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ.

ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ಪೀಠವು ಈ ನಿರ್ದೇಶನ ನೀಡಿದೆ.ಜಮಿಯತ್ ಉಲೇಮಾ-ಎ-ಹಿಂದ್, ಆಲ್ ಅಸ್ಸಾಂ ಮೈನಾರಿಟಿ ಸ್ಟೂಡೆಂಟ್ಸ್ ಯೂನಿಯನ್ (AAMSU) ಹಾಗೂ ಅಸ್ಸಾಂ ಸಾಂಖ್ಯಲಘು ಸಂಗ್ರಾಮ್ ಪರಿಷತ್ ಈ ಸಂಬಂಧ ಅರ್ಜಿ ಸಲ್ಲಿಸಿವೆ. ಅರ್ಜಿದಾರರ ಪರ ಹಿರಿಯ ವಕೀಲ ಕಪಿಲ್ ಸಿಬಲ್, ಕೇಂದ್ರ ಮತ್ತು ಅಸ್ಸಾಂ ಸರಕಾರಕ್ಕೆ ಈ ಹಿಂದೆಯೇ ನೋಟಿಸ್ ಜಾರಿಯಾಗಿದ್ದರೂ ಇನ್ನೂ ಉತ್ತರ ಸಲ್ಲಿಸಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.ಭಾರತದ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿರುವ ಉತ್ತರಕ್ಕೆ ಮರುಪ್ರತ್ಯುತ್ತರ ಸಲ್ಲಿಸಲು ಅವಕಾಶ ನೀಡುವಂತೆ ಸಿಬಲ್ ಮನವಿ ಮಾಡಿದರು.

ಇದೇ ವೇಳೆ, ಮಾಜಿ NRC ಸಂಯೋಜಕ ಹಿತೇಶ್ ದೇವ್ ಶರ್ಮಾ ಸಲ್ಲಿಸಿರುವ ಪ್ರತ್ಯೇಕ ಅರ್ಜಿಯನ್ನೂ ನ್ಯಾಯಾಲಯದ ಗಮನಕ್ಕೆ ತರಲಾಯಿತು. ಪ್ರಸ್ತುತ ಅರ್ಜಿಗಳಲ್ಲಿನ ಬೇಡಿಕೆಗಳಿಗೆ ವ್ಯತಿರಿಕ್ತವಾದ ಬೇಡಿಕೆಗಳನ್ನು ಶರ್ಮಾ ಅವರ ಅರ್ಜಿಯಲ್ಲಿ ಮಾಡಲಾಗಿದೆ. ಹೀಗಾಗಿ ಅವರ ಅರ್ಜಿಯನ್ನೂ ಇದೇ ಪ್ರಕರಣಗಳೊಂದಿಗೆ ಸೇರಿಸಿ ವಿಚಾರಣೆ ನಡೆಸಬೇಕು ಎಂದು ಹಿರಿಯ ವಕೀಲ ಮನೀಶ್ ಗೋಸ್ವಾಮಿ ಮನವಿ ಮಾಡಿದರು.

NRC ಅಂತಿಮ ಪಟ್ಟಿಯಲ್ಲಿ ಹಲವು ತಪ್ಪುಗಳಿವೆ ಎಂದು ಆರೋಪಿಸಿರುವ ಹಿತೇಶ್ ದೇವ್ ಶರ್ಮಾ, ಪಟ್ಟಿಯ ಮರುಪ್ರಮಾಣೀಕರಣ ಅಥವಾ ಮರುಪರಿಶೀಲನೆಗೆ ಕೋರಿದ್ದಾರೆ.ಕೇಂದ್ರ ಸರಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರ ವಾದ ಆಲಿಸಿದ ನ್ಯಾಯಾಲಯ, ಕೇಂದ್ರ ಮತ್ತು ಅಸ್ಸಾಂ ಸರಕಾರಗಳು ತಮ್ಮ ಉತ್ತರಗಳನ್ನು ಸಲ್ಲಿಸಿದ ಬಳಿಕ ಶರ್ಮಾ ಅವರ ಅರ್ಜಿಯನ್ನು ಇತರ ಅರ್ಜಿಗಳೊಂದಿಗೆ ಸೇರಿಸಿ ವಿಚಾರಣೆ ನಡೆಸುವ ಬಗ್ಗೆ ಪರಿಗಣಿಸಬಹುದು ಎಂದು ತಿಳಿಸಿತು.

3.11 ಕೋಟಿ ಮಂದಿಗೆ ಗುರುತಿನ ಚೀಟಿ ನೀಡುವಂತೆ ಮನವಿ

2019ರಲ್ಲಿ ಅಸ್ಸಾಂನ ಅಂತಿಮ NRC ಪಟ್ಟಿ ಪ್ರಕಟಗೊಂಡಿದ್ದರೂ, ಅದರಲ್ಲಿ ಅರ್ಹರೆಂದು ಗುರುತಿಸಲಾದ 3.11 ಕೋಟಿ ಮಂದಿಗೆ ರಾಷ್ಟ್ರೀಯ ಗುರುತಿನ ಚೀಟಿ ನೀಡುವ ಕಾನೂನುಬದ್ಧ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.2003ರ ಪೌರತ್ವ (ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಳ ವಿತರಣೆ) ನಿಯಮಗಳ ನಿಯಮ 13ರ ಅಡಿಯಲ್ಲಿ ಅರ್ಹ ನಾಗರಿಕರಿಗೆ ರಾಷ್ಟ್ರೀಯ ಗುರುತಿನ ಚೀಟಿ ನೀಡಬೇಕಿದೆ ಎಂದು ಅವರು ವಾದಿಸಿದ್ದಾರೆ.ಅಲ್ಲದೆ, NRC ಅಂತಿಮ ಪಟ್ಟಿಯಿಂದ ಹೊರಗಿಡಲಾದ ಸುಮಾರು 19 ಲಕ್ಷ ಮಂದಿಗೆ ತಿರಸ್ಕಾರ ಚೀಟಿ ನೀಡಬೇಕು ಹಾಗೂ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆ ಆರಂಭಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಅಧಿಕಾರಿಗಳು ಈ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಅಂತಿಮ NRC ಪ್ರಕ್ರಿಯೆ ಅಪೂರ್ಣವಾಗಿದೆ. ಇದು ಸಂವಿಧಾನಬಾಹಿರ ಹಾಗೂ ಅನಿಯಂತ್ರಿತವಾಗಿದ್ದು, ಸಂವಿಧಾನದ 14 ಮತ್ತು 21ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

- Advertisement -

Related news

error: Content is protected !!