Wednesday, August 12, 2026
spot_imgspot_img
spot_imgspot_img

ಅಖಂಡ ಭಾರತ ಸಂಕಲ್ಪ ದಿನ ಆಚರಣೆಗೆ ಅನುಮತಿ ನಿರಾಕರಣೆ- ಮೈಸೂರು ಪೊಲೀಸ್‌ ಆಯುಕ್ತರು, ಮಂಡಿ ಠಾಣೆ ಇನ್‌ಸ್ಪೆಕ್ಟರ್‌ಗೆ ಹೈಕೋರ್ಟ್ ನೋಟಿಸ್‌

- Advertisement -
- Advertisement -

ಬೆಂಗಳೂರು: ಸ್ವಾತಂತ್ರೋತ್ಸವದ ಅಂಗವಾಗಿ ಆಗಸ್ಟ್ 14ರಂದು ಸಂಜೆ ಮೈಸೂರು ನಗರದಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಲು ಉದ್ದೇಶಿಸಿರುವ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಮೈಸೂರು ನಗರ ಪೊಲೀಸ್ ಆಯುಕ್ತರು ಹಾಗೂ ಮಂಡಿ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.ಕಾರ್ಯಕ್ರಮ ಆಯೋಜನೆಗೆ ಅನುಮತಿ ನಿರಾಕರಿಸಿ ಮಂಡಿ ಠಾಣೆ ಇನ್‌ಸ್ಪೆಕ್ಟರ್ ನೀಡಿದ್ದ ಹಿಂಬರಹ ಪ್ರಶ್ನಿಸಿ ಕಾರ್ಯಕ್ರಮ ಆಯೋಜಕರಾದ ಹಿಂದೂ ಜಾಗರಣ ವೇದಿಕೆ ಮೈಸೂರು ನಗರ ಸಂಚಾಲಕ ಎ.ವೈ. ವಸಂತಕುಮಾ‌ರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿ ವಿಚಾರಣೆಗೆ ಬಂದಾಗ ಅರ್ಜಿದಾರರ ಪರ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿ, ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ಪೊಲೀಸರ ಕ್ರಮವನ್ನು ನ್ಯಾಯಾಲಯದ ಗಮನಕ್ಕೆ ತಂದರು.ಸರ್ಕಾರದ ಪರ ವಕೀಲರು ಪ್ರತಿಕ್ರಿಯಿಸಿ, ಅರ್ಜಿದಾರರು ಕಾರ್ಯಕ್ರಮ ನಡೆಸಲು ಉದ್ದೇಶಿಸಿರುವ ಪ್ರದೇಶ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ನಾಲ್ಕು ವರ್ಷಗಳಿಂದ ಅಲ್ಲಿ ಸೇನಾ ತುಕಡಿಗಳನ್ನು ನಿಯೋಜಿಸಲಾಗಿದೆ.

ಅಲ್ಲದೆ, ಅರ್ಜಿದಾರರಾದ ಸಂಘಟನೆಯ ಸಂಚಾಲಕರ ವಿರುದ್ಧ ವಿವಿಧ ಐದು ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ವಿಷಯಗಳನ್ನೂ ನ್ಯಾಯಾಲಯ ಗಮನಿಸಬೇಕು. ಅಷ್ಟಕ್ಕೂ ಸೋಮವಾರ ಅರ್ಜಿ ಸಲ್ಲಿಕೆಯಾಗಿದ್ದು, ಮರುದಿನವೇ (ಮಂಗಳವಾರ) ವಿಚಾರಣೆಗೆ ಬಂದಿದೆ. ಪೊಲೀಸರಿಂದ ಅಗತ್ಯ ಮಾಹಿತಿ ಕಡೆದುಕೊಳ್ಳಬೇಕು, ಅದಕ್ಕಾಗಿ ಒಂದು ದಿನ ಅವಕಾಶ ನೀಡುವಂತೆ ಕೋರಿದರು.ಆಗ ಅರ್ಜಿದಾರರ ಪರ ವಕೀಲರು, ಸ್ವಾತಂತ್ರ್ಯ ದಿನಚಾರಣೆ ಒಂದು ಜಾತ್ಯಾತೀತ ಚಟುವಟಿಕೆಯಾಗಿದ್ದು, ಅಲ್ಲಿ ಯಾರ ಭಾವನೆಗೂ ಧಕ್ಕೆಯಾಗುವ ವಿಚಾರವಿಲ್ಲ. ಶಾಂತಿಯುತವಾಗಿ ಕಾರ್ಯಕ್ರಮ ನಡೆಯಲಿದೆ ಎಂದು ಸಮರ್ಥಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಒಂದು ಕಡೆ ಮಾತ್ರ ಕಾರ್ಯಕ್ರಮ ನಡೆಸುವುದಾಗಿದ್ದರೆ ಸರಿ.ಆದರೆ, 2.5 ಕಿ.ಮೀ. ಮೆರವಣಿಗೆ ನಡೆಯುತ್ತೆ ಎಂದಾದರೆ ಯೋಚಿಸಬೇಕಾಗುತ್ತದೆ.ಕಾರ್ಯಕ್ರಮದ ಸಂಪೂರ್ಣ ಹೊಣೆ ಸಂಘಟಕರೇ ಹೊರಬೇಕು, ಸಂಘಟಕರ ಹೆಸರು ಹಾಗೂ ವಿವರಗಳನ್ನು ಕೊಡಬೇಕು ಎಂದು ಮೌಖಿಕವಾಗಿ ಹೇಳಿತು.

ಅಂತಿಮವಾಗಿ, ಪ್ರತಿವಾದಿಗಳಾದ ಮೈಸೂರು ನಗರ ಪೊಲೀಸ್‌ ಆಯುಕ್ತರು ಹಾಗೂ ಮಂಡಿ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ಗೆ ನೋಟಿಸ್‌ ಜಾರಿಗೊಳಿಸಿತಲ್ಲದೆ, ಸರ್ಕಾರದ ಪರ ವಕೀಲರ ಮನವಿಯಂತೆ ಒಂದು ದಿನ ಕಾಲಾವಕಾಶ ನೀಡಿ ವಿಚಾರಣೆಯನ್ನು ಬುಧವಾರಕ್ಕೆ (ಜುಲೈ 12) ಮುಂದೂಡಿತು.

- Advertisement -

Related news

error: Content is protected !!