

ಬೆಂಗಳೂರು : ಎಂಬತ್ತನೆ ಸ್ವಾತಂತ್ರೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಲೋಕಭವನ (ರಾಜಭವನ) ಕರ್ನಾಟಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.


ಆ.16, 17 ಮತ್ತು 18ರಂದು ಮೂರು ದಿನಗಳ ಕಾಲ ಪ್ರತಿದಿನ ಸಂಜೆ 5.30ರಿಂದ 7.30ರ ವರೆಗೆ ದೀಪಾಲಂಕಾರಗೊಂಡಿರುವ ಲೋಕಭವನವನ್ನು ಸಾರ್ವಜನಿಕರು ಕಣ್ಣುಂಬಿಕೊಳ್ಳಬಹುದಾಗಿದೆ. ಭೇಟಿಯನ್ನು ಸುರಕ್ಷಿತ ಹಾಗೂ ಸುಗಮವಾಗಿ ನಡೆಸಲು ಸಾರ್ವಜನಿಕರು ಭದ್ರತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಲೋಕಭವನ ಪ್ರವೇಶಿಸುವ ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಅಥವಾ ಸರಕಾರದಿಂದ ನೀಡಲಾದ ಯಾವುದೇ ಗುರುತಿನ ಚೀಟಿಯನ್ನು ಭದ್ರತಾ ಸಿಬ್ಬಂದಿಗೆ ಪರಿಶೀಲನೆಗಾಗಿ ತೋರಿಸಬೇಕು. ಎಲ್ಲ ಸಂದರ್ಶಕರೂ ಕಡ್ಡಾಯ ಭದ್ರತಾ ತಪಾಸಣೆಗೆ ಒಳಪಡಬೇಕು.ಸಂದರ್ಶಕರು ನಿಗದಿತ ಮಾರ್ಗ ಹಾಗೂ ಸ್ಥಳಗಳಲ್ಲಿ ಮಾತ್ರ ಸಂಚರಿಸಬೇಕು ಮತ್ತು ಆವರಣದಲ್ಲಿ ಶಾಂತಿ, ಶಿಸ್ತು ಹಾಗೂ ಸಭ್ಯತೆ ಕಾಪಾಡಬೇಕು. ಖಾಸಗಿ ಹಾಗೂ ಟ್ಯಾಕ್ಸಿ ವಾಹನಗಳಿಗೆ ಲೋಕಭವನದ ಆವರಣದೊಳಗೆ ಪ್ರವೇಶ ಇರುವುದಿಲ್ಲ.
ಬ್ಯಾಗ್, ಬ್ಯಾಕ್‌ಪ್ಯಾಕ್, ಆಹಾರ ಪದಾರ್ಥಗಳು, ಪಾನ್, ಗುಟ್ಕಾ ತಂಬಾಕು, ಸಿಗರೇಟ್, ಮದ್ಯ ವೃತ್ತಿಪರ ಕ್ಯಾಮೆರಾ, ಲ್ಯಾಪ್ಟಾಪ್, ವಿದ್ಯುನ್ಮಾನ ಉಪಕರಣಗಳು, ಚೂಪಾದ ಅಥವಾ ಲೋಹದ ವಸ್ತುಗಳು, ಬೆಂಕಿ ಪೊಟ್ಟಣ, ಲೈಟರ್, ದಹನಶೀಲ ವಸ್ತುಗಳು, ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಲೋಕಭವನದೊಳಗೆ ತರುವುದನ್ನು ನಿಷೇಧಿಸಲಾಗಿದೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








