ಅಹಮದಾಬಾದ್: ನಾಲ್ಕು ದಿನಗಳ ಹಿಂದಷ್ಟೇ ಭದ್ರತಾ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದ್ದ ವ್ಯಕ್ತಿಯೊಬ್ಬ ಅಪಾರ್ಟೆಂಟ್ ನ ಟೆರೇಸ್ ನಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಧರಂ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯ ಹಿನ್ನೆಲೆಯನ್ನು ಪರಿಶೀಲಿಸುವಲ್ಲಿ ನೇಮಕಾತಿ ಸಂಸ್ಥೆ ವಿಫಲವಾಗಿರುವುದು ಈ ಘಟನೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ನಿವಾಸಿಯಾಗಿರುವ ಧರಂ ಸಿಂಗ್, ಮಹಿಳೆಯನ್ನು ಮೊದಲು ಉಸಿರುಗಟ್ಟಿಸಿ ಬಳಿಕ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯನ್ನು ಟೆರೇಸ್ ನಲ್ಲೇ ಕೂಡಿ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಜಂಟಿ ಪೊಲೀಸ್ ಆಯುಕ್ತ (ಸೆಕ್ಟರ್ 1) ನೀರಜ್ ಬದ್ಲುಜಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶನಿವಾರ ತಡರಾತ್ರಿ ಸಂತ್ರಸ್ತ ಮಹಿಳೆ ಕಟ್ಟಡದ ಟೆರೇಸ್ ಗೆ ವಾಯು ವಿಹಾರಕ್ಕೆ ತೆರಳಿದ್ದಾಗ ಘಟನೆ ನಡೆದಿದೆ. ಭದ್ರತಾ ಸಿಬ್ಬಂದಿ ಲಿಫ್ಟ್ ಮತ್ತು ಮೆಟ್ಟಿಲುಗಳ ಮೂಲಕ ಟೆರೇಸ್ ಗೆ ತೆರಳಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ ಎಂದು ಅವರು ಹೇಳಿದ್ದಾರೆ.
‘ಆರೋಪಿ ಧರಂ ಸಿಂಗ್ ಅಪಾರ್ಟೆಂಟ್ನಲ್ಲಿ ಕೇವಲ ನಾಲ್ಕು ದಿನಗಳ ಹಿಂದಷ್ಟೇ ಕೆಲಸ ಪ್ರಾರಂಭಿಸಿದ್ದ’ ಎಂದು ನೀರಜ್ ಬದ್ಗುಜಾರ್ ತಿಳಿಸಿದ್ದಾರೆ.
ಘಟನೆಯ ಬಳಿಕ ಧರಂ ಸಿಂಗ್ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ, ಪೊಲೀಸರು, ಸ್ಥಳೀಯ ಅಪರಾಧ ವಿಭಾಗ ಮತ್ತು ಅಪರಾಧ ವಿಭಾಗದ ಸಿಬ್ಬಂದಿಯನ್ನು ಒಳಗೊಂಡ 10 ತಂಡಗಳನ್ನು ರಚಿಸಿ ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು.
ಬಳಿಕ ಶೋಧ ಕಾರ್ಯಾಚರಣೆ ನಡೆಸಿದ ತಂಡಗಳು ಬೆಳಿಗ್ಗೆ ಸುಮಾರು 7ರಿಂದ 8 ಗಂಟೆಯ ವೇಳೆಗೆ ಹೇಬತ್ ಪುರ ಪ್ರದೇಶದ ಬಳಿ ಧರಂ ಸಿಂಗ್ನನ್ನು ಬಂಧಿಸಿದವು ಎಂದು ಅವರು ತಿಳಿಸಿದ್ದಾರೆ.
ಆನಂದ್ ನಗರ ಪ್ರದೇಶದಲ್ಲಿರುವ ಅಪಾರ್ಟೆಂಟ್ ಗೆ ಭದ್ರತಾ ಸಿಬ್ಬಂದಿಯಾಗಿ ಸೇರುವುದಕ್ಕೂ ಮುನ್ನ ಧರಂ ಸಿಂಗ್ ಅಹಮದಾಬಾದ್ ನ ವಿವಿಧ ಕಂಪೆನಿಗಳಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದ ಎಂದು ಅವರು ಹೇಳಿದ್ದಾರೆ.
ಧರಂ ಸಿಂಗ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ವಿಧಿವಿಜ್ಞಾನ ತಂಡವು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸಂತ್ರಸ್ತ ಮಹಿಳೆ ಮತ್ತು ಆರೋಪಿಯ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದೆ ಎಂದು ನೀರಜ್ ಬದ್ಗುಜಾರ್ ತಿಳಿಸಿದ್ದಾರೆ.
ತನಿಖೆಯ ಭಾಗವಾಗಿ DNA ಸಂಬಂಧಿತ ವಿಧಿವಿಜ್ಞಾನ ಪರೀಕ್ಷೆಗಳನ್ನು ನಡೆಸಲು ಪೊಲೀಸರು ಮುಂದಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.








