ಪುತ್ತೂರು:ಪೆಟ್ರೋಲ್ ಸುರಿದು ಪತ್ನಿ,ಮಕ್ಕಳ ಕೊಲೆಗೆ ಯತ್ನಿಸಿದ್ದ ಆರೋಪಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.

ಅರಿಯಡ್ಕ ಗ್ರಾಮದ ಎಂಡೆಸಾಗು ನಿವಾಸಿ ಮಮ್ಮುಂಞರವರ ಮಗ ಅಬ್ದುಲ್ ರಹೀಂ ಎಂಬಾತನ ವಿರುದ್ಧ ಆತನ ಪತ್ನಿ ನೀಡಿದ್ದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.



ಮದುವೆಯಾಗಿ ಮೂರು ವರ್ಷಗಳ ಕಾಲ ನಾವು ಅನ್ಯೂನ್ಯವಾಗಿದ್ದು ಆ ಬಳಿಕ ಸಣ್ಣಪುಟ್ಟ ವಿಚಾರಗಳಿಗೆ ಪತಿ ತನ್ನೊಂದಿಗೆ ಜಗಳವಾಡಿ ಹೊಡೆಯುತ್ತಿದ್ದರು.ಗಂಡ ಹಿಂಸೆ ಮಾಡಿದ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದೆ.ಈ ದೂರನ್ನು ವಾಪಸ್ ಪಡೆದುಕೊಳ್ಳದೇ ಇದ್ದಲ್ಲಿ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದರಿಂದ ದೂರು ವಾಪಸ್ ಪಡೆದುಕೊಂಡಿದ್ದೆ.ಗಂಡನ ಹಿಂಸೆ ತಾಳಲಾರದೆ ತಾನು ಕೆದಿಲ ಸತ್ತಿಕಲ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಕಳೆದ ಜ.17ರಂದು ಸಂಜೆ ರಿಕ್ಷಾದಲ್ಲಿ ಅಲ್ಲಿಗೆ ಬಂದ ಗಂಡ ಅಬ್ದುಲ್ ರಹೀಂ ಕಿಟಕಿ ಮೂಲಕ ಕೈಹಾಕಿ ಬಾಗಿಲಿನ ಚಿಲಕ ತೆಗೆದು ಒಳಗೆ ಬಂದು ಬ್ಯಾಗಿನಿಂದ ಬಾಟಲಿಗಳನ್ನು ತೆಗೆದು ಏಕಾಏಕಿ ಪೆಟ್ರೋಲನ್ನು ತನಗೆ ಹಾಗೂ ಮಕ್ಕಳ ಮೈಗೆ ಎರಚಿದ್ದರು.ಆಸಮಯ ನಾನು ಬೊಬ್ಬೆ ಹೊಡೆದುದರಿಂದ ನೆರೆಮನೆಯವರು ಬಂದು ಆತನನ್ನು ಹಿಡಿದುಕೊಂಡು ಬೆಂಕಿ ಪೊಟ್ಟಣವನ್ನು ಕೈಯಿಂದ ಎಳೆದು ಬಿಸಾಡಿದ್ದರು..
ಗಂಡ ಅಬ್ದುಲ್ ರಹೀಮ್ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ನನ್ನ ಮತ್ತು ಮಕ್ಕಳ ಕೊಲೆಗೆ ಯತ್ನಿಸಿದ್ದಾಗಿ ಆರೋಪಿಸಿ ಆತನ ಪತ್ನಿ ನೀಡಿದ್ದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಆರೋಪಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಆರೋಪಿ ಪರ ವಕೀಲರಾದ ಕುಂಬ್ರ ದುರ್ಗಾಪ್ರಸಾದ್ ರೈ,ಅರಂತನಡ್ಕ ಬಾಲಕೃಷ್ಣ ರೈ, ಭವ್ಯಾ ಮೇರ್ಲ, ರಮ್ಲತ್ ಪೆರುವಾಯಿ ವಾದಿಸಿದ್ದರು.







