ಏಳೂವರೆ ವರ್ಷದ ಬಿಎಎಂಎಸ್ ಕೋರ್ಸ್‌ಗೆ ಅರ್ಜಿ ಆಹ್ವಾನ



ಮಂಗಳೂರು: ಬಂಟ್ವಾಳ ತಾಲೂಕಿನ ಕೊಡಂಗಾಯಿ ಮೂರ್ಕಜೆ ಯಲ್ಲಿರುವ ಅಜೇಯ ಟ್ರಸ್ಟ್ ಸಂಚಾಲಿತ ಮೈತ್ರೇಯಿ ಆಯುರ್ವೇದ ಗುರುಕುಲ ಕ್ಯಾಂಪಸ್‌ನಲ್ಲಿ ಏಳೂವರೆ ವರ್ಷದ ಬಿಎಎಂಎಸ್ ಕೋರ್ಸ್‌ನ್ನು ಆರಂಭಿಸಲಾಗುತ್ತಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮೈತ್ರೇಯಿ ಆಯುರ್ವೇದ ಗುರುಕುಲದ ಪ್ರಾಂಶುಪಾಲರಾದ ಡಾ.ರವಿಗಣೇಶ್ ಮೊಗ್ರ ಅವರು, ಭಾರತ ಸರ್ಕಾರದ ಆಯುಷ್ ಸಚಿವಾಲಯ ಕೈಗೊಂಡಿರುವ ಯೋಜನೆಗೆ ಅನುಗುಣವಾಗಿ ಮೈತ್ರೇಯಿ ಆಯುರ್ವೇದ ಗುರುಕುಲ ಪ್ರಾಚೀನ ಗುರುಕುಲ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಭಾರತೀಯ ವೈದ್ಯಕೀಯ ವ್ಯವಸ್ಥೆಗಳ ಆಯೋಗ(ಎನ್‌ಸಿಐಎಸ್ಎಂ) ನಿಯಮಾವಳಿಯಡಿಯಲ್ಲಿ ಕಡ್ಡಾಯ ವಸತಿ ಸಹಿತ ಏಳೂವರೆ ವರ್ಷದ ಆಯುರ್ವೇದ ಗುರುಕುಲ ಕೋರ್ಸ್ ಆರಂಭವಾಗುತ್ತಿದೆ. ಆ.20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (sanskritadm.samarth.edu.in) ಎಂದರು.
ಮೈತ್ರೇಯಿ ಆಯುರ್ವೇದ ಗುರುಕುಲವು ಹೆಣ್ಣುಮಕ್ಕಳಿಗೆ ಮಾತ್ರ ವಿದ್ಯಾಭ್ಯಾಸವನ್ನು ನೀಡುವ ಅನುಮತಿ ಹೊಂದಿದೆ. 10ನೇ ತರಗತಿ ತೇರ್ಗಡೆ ಹೊಂದಿದ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಈ ತರಬೇತಿಯ 2 ವರ್ಷ ಪಿಯುಸಿ, ನಾಲ್ಕುವರ್ಷ ಬಿಎಎಂಎಸ್ ಮತ್ತು 1 ವರ್ಷದ ಇಂಟರ್ನ್‌ಶಿಪ್‌ನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಪ್ರತಿ ಬ್ಯಾಚ್‌ಗೆ 50 ವಿದ್ಯಾರ್ಥಿನಿಯರಿಗೆ ಮಾತ್ರ ಅವಕಾಶವಿದೆ. ಪ್ರತಿ ರಾಜ್ಯದ 5 ಕೋಟಿ ಜನಸಂಖ್ಯೆಗೆ ಒಂದು ಆಯುರ್ವೇದ ಗುರುಕುಲಕ್ಕೆ ಅನುಮತಿ ನೀಡಲಾಗಿದೆ. ಮತ್ತು ಕರ್ನಾಟಕದಲ್ಲಿ ಮೈತ್ರೇಯಿ ಆಯುರ್ವೇದ ಗುರುಕುಲವು ಪ್ರಥಮವಾಗಿ ಕೋರ್ಸ್ ಆರಂಭಿಸಿರುವುದು ಹೆಮ್ಮೆಯ ವಿಷಯ. 2026ನೇ ಸಾಲಿನ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಮೈತ್ರೇಯಿ ಆಯುರ್ವೇದ ಗುರುಕುಲವು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಿದೆ. 10ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ನೀಟ್-ಪಿಎ(ಪ್ರಿ ಆಯುರ್ವೇದ ಪ್ರೋಗ್ರಾಂ) ಮೂಲಕ ಪ್ರವೇಶ ನೀಡಲಾಗುತ್ತದೆ ಎಂದು ತಿಳಿಸಿದರು.
ಮೌಲ್ಯಾಧಾರಿತ ಶಿಕ್ಷಣ, ಪ್ರಾಮಾಣಿಕ ಆಯುರ್ವೇದ ಚಿಕಿತ್ಸಾ ಸೇವೆಗಳು, ಸಂಸ್ಕೃತದಲ್ಲಿ ಗಾಢವಾದ ಜ್ಞಾನವನ್ನು ಮೂಡಿಸುವುದು, ಸಾಂಪ್ರದಾಯಿಕ ಗುರುಕುಲ ಶಿಕ್ಷಣವನ್ನು ಆಧುನಿಕ ಶಿಕ್ಷಣದೊಂದಿಗೆ ಸಂಯೋಜಿಸುವ ಜವಾಬ್ದಾರಿಯನ್ನು ನಮ್ಮ ಸಂಸ್ಥೆ ಹೊಂದಿದೆ. ಪ್ರಸ್ತಾವಿತ 60 ಹಾಸಿಗೆಗಳ ಆಯುರ್ವೇದ ಆಸ್ಪತ್ರೆಯು ದ.ಕ ಹಾಗೂ ಕಾಸರಗೋಡು ಜಿಲ್ಲೆಯ ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳ ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸಲು ಅತ್ಯಂತ ಅನುಕೂಲಕರವಾಗಿದೆ. ಪಂಚಕರ್ಮ, ಕಾಯಕಲ್ಪ ಹಾಗೂ ಇತರ ವಿಶೇಷ ಚಿಕಿತ್ಸಾ ಸೇವೆಗಳನ್ನು ಲಭ್ಯಗೊಳಿಸುವುದು, ಆಯುರ್ವೇದ ವಿದ್ಯಾರ್ಥಿಗಳಿಗೆ ಕ್ಲಿನಿಕಲ್ ತರಬೇತಿ ಮತ್ತು ಪ್ರಾಯೋಗಿಕ ಅನುಭವ ಒದಗಿಸುವುದು, ಸಂಶೋಧನೆ ಹಾಗೂ ಸಮುದಾಯ ಆರೋಗ್ಯ ಕಾರ್ಯಕ್ರಮಗಳನ್ನು ಉತ್ತೇಜಿಸುವುದು, ಸ್ಥಳೀಯ ಸಮುದಾಯದ ಆರೋಗ್ಯ ಜಾಗೃತಿ ಮತ್ತು ಜೀವನ ಮಟ್ಟವನ್ನು ಸುಧಾರಿಸುವಲ್ಲಿ ವಿಶೇಷ ಆದ್ಯತೆ ನೀಡಲಾಗುವುದು ಎಂದು ಸುಬ್ರಾಯ ಪೈ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಟ್ರಸ್ಟಿ ಡಾ.ಸುಧಾ ರಾವ್, ಕಾರ್ಯದರ್ಶಿ ರೂಪಲೇಖಾ ಉಪಸ್ಥಿತರಿದ್ದರು.








