Sunday, August 16, 2026
spot_imgspot_img
spot_imgspot_img

ಮಂಗಳೂರು/ಮೈಸೂರು: KFC ಸೇರಿ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ; ಅವಧಿ ಮೀರಿದ ಮಾಂಸ ಜಪ್ತಿ

- Advertisement -
- Advertisement -

ಮಂಗಳೂರು/ಮೈಸೂರು: ರಾಜ್ಯದ ಪ್ರಮುಖ ನಗರಗಳಾದ ಮಂಗಳೂರು ಮತ್ತು ಮೈಸೂರಿನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿದ್ದು, ಮಂಗಳೂರಿನ ಪ್ರತಿಷ್ಠಿತ KFC ಮಳಿಗೆ ಸೇರಿದಂತೆ ವಿವಿಧ ಹೋಟೆಲ್‌ಗಳಲ್ಲಿ ಹಳೆಯ ಹಾಗೂ ಅವಧಿ ಮೀರಿದ ಮಾಂಸ ಪತ್ತೆಯಾಗಿದೆ.ಮಂಗಳೂರಿನ ಕೆ.ಎಸ್.ರಾವ್ ರಸ್ತೆಯ ಸಿಟಿ ಸೆಂಟರ್ ಮಾಲ್‌ನಲ್ಲಿರುವ KFC ಮಳಿಗೆಗೆ ಗ್ರಾಹಕರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಚಿಕನ್ ಕೊಳೆತು ಹೋಗಿದ್ದು, ತೀವ್ರ ದುರ್ವಾಸನೆ ಬರುತ್ತಿದೆ ಎಂದು ಗ್ರಾಹಕರು ದೂರು ನೀಡಿದ್ದರು.ದೂರಿನ ಹಿನ್ನೆಲೆಯಲ್ಲಿ ಮಳಿಗೆಗೆ ಭೇಟಿ ನೀಡಿ ತಪಾಸಣೆ ನಡೆಸಿದ ಅಧಿಕಾರಿಗಳಿಗೆ ಕೊಳೆತ ಸ್ಥಿತಿಯಲ್ಲಿದ್ದ ಚಿಕನ್ ಪೀಸ್‌ಗಳು ಪತ್ತೆಯಾಗಿವೆ. ಪರಿಶೀಲನೆ ವೇಳೆ ಕಳೆದ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಪ್ಯಾಕ್ ಮಾಡಲಾಗಿದ್ದ ಹಳೆಯ ಕೋಳಿ ಮಾಂಸವೂ ಪತ್ತೆಯಾಗಿದೆ.

ಫ್ರೋಜನ್ ಚಿಕನ್ ಅನ್ನು ತಿಂಗಳುಗಟ್ಟಲೆ ಸಂಗ್ರಹಿಸಿ ಬಳಸಬಹುದು ಎಂದು KFC ಸಿಬ್ಬಂದಿ ಅಧಿಕಾರಿಗಳಿಗೆ ಸಮಜಾಯಿಷಿ ನೀಡಿದ್ದಾರೆ ಎನ್ನಲಾಗಿದೆ. ಆದರೆ ಅಧಿಕಾರಿಗಳು ಮಳಿಗೆಯ ಗೋಡೌನ್‌ನ್ನು ಸೀಜ್ ಮಾಡಿ, ಕೋಳಿ ಮಾಂಸ ಹಾಗೂ ಅಡುಗೆಗೆ ಬಳಸುತ್ತಿದ್ದ ಎಣ್ಣೆಯ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.ಘಟನಾ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ KFC ಮಳಿಗೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಪ್ರಯೋಗಾಲಯದ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ಮೈಸೂರಿನಲ್ಲೂ ಆಹಾರ ಸುರಕ್ಷತಾ ಅಧಿಕಾರಿಗಳು ವಿವಿಧ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದು, ತಪಾಸಣೆ ವೇಳೆ ಅವಧಿ ಮೀರಿದ ಮಾಂಸ ಪತ್ತೆಯಾಗಿದೆ. ಅಧಿಕಾರಿಗಳು ಹೋಟೆಲ್‌ಗಳಲ್ಲಿ ಸಂಗ್ರಹಿಸಿಡಲಾಗಿದ್ದ ಮಾಂಸದ ಗುಣಮಟ್ಟ ಹಾಗೂ ಅವಧಿಯನ್ನು ಪರಿಶೀಲಿಸಿ, ನಿಯಮ ಉಲ್ಲಂಘಿಸಿರುವ ಕಡೆಗಳಲ್ಲಿ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.ಆಹಾರ ಪದಾರ್ಥಗಳ ಗುಣಮಟ್ಟ, ಸಂಗ್ರಹಣೆ ಹಾಗೂ ಅವಧಿ ವಿಚಾರದಲ್ಲಿ ನಿಯಮ ಉಲ್ಲಂಘಿಸುವ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಹಾರ ಸುರಕ್ಷತಾ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

- Advertisement -

Related news

error: Content is protected !!