Monday, August 17, 2026
spot_imgspot_img
spot_imgspot_img

ವಿಆರ್‌ಎಲ್’ ಸಂಸ್ಥೆಗೆ ಸುವರ್ಣ ‘ಸಂಭ್ರಮ’-ಮೈಸೂರಿನಲ್ಲಿ ವಿಶೇಷ ಸಮಾರಂಭ – ಬೃಹತ್ ಗೋದಾಮು ಉದ್ಘಾಟನೆ

- Advertisement -
- Advertisement -

ಮೈಸೂರು:*ಕನಸು, ಪರಿಶ್ರಮ, ನಂಬಿಕೆ, ಸವಾಲುಗಳನ್ನು ಮೆಟ್ಟಿ ನಿಂತು ಐದು ದಶಕಗಳ ಯಶಸ್ವಿ ಸೇವೆಯನ್ನು ಪೂರೈಸಿದ ‘ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್’ನ ಸುವರ್ಣ ಮಹೋತ್ಸವ ಸಮಾರಂಭ ಶನಿವಾರ ಮೈಸೂರಿನಲ್ಲಿ ಸಂಭ್ರಮದಿಂದ ಜರುಗಿತು.

ಸಂಸ್ಥೆಗೆ ಸುವರ್ಣ ಮಹೋತ್ಸವದ ಜತೆಗೆ ನಗರದ ಬನ್ನಿಮಂಟಪ ಬಡಾವಣೆಯ ಜೋಡಿ ತೆಂಗಿನಮರ ರಸ್ತೆ ಬಳಿ ನೂತನವಾಗಿ ನಿರ್ಮಾಣವಾಗಿರುವ ವಿಆರ್‌ಎಲ್ ಕಟ್ಟಡ, ಬೃಹತ್ ಗೋದಾಮು ಕಟ್ಟಡ ಲೋಕಾರ್ಪಣೆ ಸಹ ಇದೇ ವೇಳೆ ನೆರವೇರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಜನರು ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು. ಮಾತ್ರವಲ್ಲದೆ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಹಾಗೂ ವಿಜಯಾನಂದ ಟ್ರಾವೆಲ್ಸ್ ಎಂಡಿ ಶಿವ ಸಂಕೇಶ್ವರ ಅವರನ್ನು ಅಭಿನಂದಿಸಿ, ಸಂಸ್ಥೆಯ ಮುಂದಿನ ಪಯಣವೂ ಇನ್ನಷ್ಟು ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.

ವಿಭಿನ್ನ ಆಲೋಚನೆಯ ಫಲ:

ವಿಆರ್‌ಎಲ್ ಸಂಸ್ಥೆಯ ಆರಂಭದ ದಿನಗಳನ್ನು ಸ್ಮರಿಸಿದ ಡಾ.ವಿಜಯ ಸಂಕೇಶ್ವರ ಅವರು, ನನ್ನ ತಂದೆ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಕುಟುಂಬದ ಎಲ್ಲರೂ ಒಂದೇ ಕ್ಷೇತ್ರದಲ್ಲಿ ಮುಂದುವರಿಯುವ ಬದಲು, ವಿಭಿನ್ನ ಕ್ಷೇತ್ರದಲ್ಲಿ ಹೆಜ್ಜೆ ಇಡಬೇಕು ಎಂಬ ಆಲೋಚನೆಯಿಂದ ವಿಆರ್‌ಎಲ್ ಸಂಸ್ಥೆಯನ್ನು ಆರಂಭಿಸಲಾಯಿತು. 10 ವರ್ಷಗಳ ಕಾಲ ನಿರಂತರ ನಷ್ಟ ಹಾಗೂ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಆದರೆ, ಆ ಸಂಕಷ್ಟದ ದಿನಗಳಲ್ಲಿಯೂ ಸೇವೆಯ ಗುಣಮಟ್ಟ ಹಾಗೂ ಆರ್ಥಿಕ ಶಿಸ್ತಿನಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ನಮ್ಮ ಕಾರ್ಯವೈಖರಿಯನ್ನು ಜನರು ಗುರುತಿಸಿ, ವಿಶ್ವಾಸವಿಟ್ಟು ಆಶೀರ್ವದಿಸಿದರು. ಅವರ ಬೆಂಬಲವೇ ನಮಗೆ ಬೆನ್ನುತಟ್ಟಿ ಮುನ್ನಡೆಯುವ ಶಕ್ತಿ ನೀಡಿತು ಎಂದು ಸ್ಮರಿಸಿದರು.ದೇಶದಲ್ಲಿಯೇ ಅತಿಹೆಚ್ಚು ವಾಹನಗಳನ್ನು ಹೊಂದಿರುವ ಸಂಸ್ಥೆ ನಮ್ಮದಾಗಿದೆ. ಟ್ರಕ್ ಹಾಗೂ ಬಸ್ ಸೇರಿ 7೦೦೦ ವಾಹನಗಳಿವೆ. ದೇಶದಲ್ಲಿ 13೦೦ ಶಾಖೆಗಳು, ಶ್ರೀನಗರದಿಂದ ತಿರುವನಂತಪುರಂವರೆಗೆ ನಮ್ಮ ಸೇವೆ ವಿಸ್ತರಿಸಿದೆ.

ಇದು ಸಾಧ್ಯವಾಗಿದ್ದು ನಮ್ಮ ಸಮರ್ಪಣಾ ಮನೋಭಾವದಿಂದ. ಕೆಲಸ ಮಾಡುವ ಸಿಬ್ಬಂದಿಯ ಸೇವೆಯಿಂದ ಎಂದು ಹೇಳಿದರು.

ಆರ್ಥಿಕ ಶಿಸ್ತು ಯಶಸ್ಸಿನ ಮೂಲ:

ವಿಆರ್‌ಎಲ್ ಸಮೂಹ ಸಂಸ್ಥೆ ಬೆಳೆದು ಬಂದ ಕಠಿಣ ಹಾದಿಯನ್ನು ವಿವರಿಸಿದ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ, ಲಾಜಿಸ್ಟಿಕ್ಸ್ ಕಂಪನಿ ನಡೆಸುವುದು ಅತ್ಯಂತ ಸವಾಲಿನ ವಿಚಾರ. ಟೆಲಿಫೋನ್ ಕೂಡ ಸರಿಯಾಗಿ ಸಿಗದ ಆ ದಿನಗಳಲ್ಲಿ ಪ್ರತಿ ಹೆಜ್ಜೆಯೂ ಕಷ್ಟಕರವಾಗಿತ್ತು. ಮನೆ ಮನೆ ಪ್ರಚಾರ ಮಾಡಿದ ಉದಾಹರಣೆಗಳಿವೆ. ಇವತ್ತಿನ ಸ್ಮಾರ್ಟ್ ದಿನಗಳಲ್ಲಿ ತಂತ್ರಜ್ಞಾನ ಸಾಕಷ್ಟು ಬೆಳವಣಿಗೆ ಕಂಡಿದೆ. ಆದರೆ ನನ್ನ ತಂದೆ ಈ ಸಂಸ್ಥೆ ಪ್ರಾರಂಭಿಸಿದಾಗ ಇಂತಹ ಯಾವುದೇ ವ್ಯವಸ್ಥೆ ಇಲ್ಲದೆಯೂ ಅವರು ವಿಆರ್‌ಎಲ್ ಅನ್ನು ಯಶಸ್ವಿಯಾಗಿ ಕಟ್ಟಿದರು ಎಂದು ಡಾ.ವಿಜಯ ಸಂಕೇಶ್ವರ ಅವರ ಸಾಧನೆಯನ್ನು ಸ್ಮರಿಸಿದರು.

ಶಾಸಕರಾದ ಜಿ.ಟಿ.ದೇವೇಗೌಡ, ಎ.ಆರ್. ಕೃಷ್ಣಮೂರ್ತಿ, ಟಿ.ಎಸ್. ಶ್ರೀವತ್ಸ, ಕೆ. ರವಿಶಂಕರ್, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ಎಸ್.ಎ. ರಾಮದಾಸ್, ಎಂ.ಕೆ. ಸೋಮಶೇಖರ್, ಎಲ್. ನಾಗೇಂದ್ರ, ನಿರಂಜನ್ ಕುಮಾರ್, ಎಂಎಲ್‌ಸಿಗಳಾದ ಗೋ.ಮಧುಸೂದನ್, ತೋಂಟದಾರ್ಯ ಇತರರು ಇದ್ದರು.

ಹಣದ ಕೊರತೆ ನಡುವೆಯೂ ಡಾ. ವಿಜಯ ಸಂಕೇಶ್ವರ ಅವರು ಉದ್ಯಮ ಪ್ರಾರಂಭಿಸಿ ದೇಶದಲ್ಲಿ ನಂ.1 ಲಾಜಿಸ್ಟಿಕ್ಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿರುವುದು ಸಾಮಾನ್ಯವಾದ ಮಾತಲ್ಲ. ವೃತ್ತಿಪರತೆ ಹಾಗೂ ಆರ್ಥಿಕ ಶಿಸ್ತು ಮೈಗೂಡಿಸಿಕೊಂಡವರಿಗೆ ಮಾತ್ರ ಇಂತಹ ಸಾಧನೆ ತೋರಲು ಸಾಧ್ಯ. ಕನ್ನಡಿಗರಾದ ಡಾ. ವಿಜಯ ಸಂಕೇಶ್ವರ ಅವರು ಇಷ್ಟೊಂದು ದೊಡ್ಡ ಸಂಸ್ಥೆಯನ್ನು ಕಟ್ಟಿ ಬೆಳೆಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಡಾ.ಯತೀಂದ್ರ ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಸಚಿವ*

ಐವತ್ತು ವರ್ಷ ಎಂಬುದು ಸಣ್ಣ ಮೈಲಿಗಲ್ಲೇನೂ ಅಲ್ಲ. ವಿಆರ್‌ಎಲ್ ಸಂಸ್ಥೆ 5೦ ವರ್ಷಗಳನ್ನು ಪೂರೈಸಿರುವುದು ಸಂತಸದ ವಿಚಾರ. ವಿಆರ್‌ಎಲ್‌ನ ಒಂದು ಟ್ರಕ್ ನೋಡಿದಾಗ ನಮಗೆ ವಿಶ್ವಾಸ ಮೂಡುತ್ತದೆ. ಅದಕ್ಕಾಗಿ ನಾವು ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇವೆ. ಪ್ರಸ್ತುತ ಎಲ್ಲರೂ ನವೋದ್ಯಮ ಪ್ರಾರಂಭಿಸುತ್ತಿದ್ದಾರೆ. ನವೋದ್ಯಮ ಪ್ರಾರಂಭಿಸಲು ವಿಆರ್‌ಎಲ್ ಮಾದರಿಯಾಗಿದೆ. ಈ ಸಂಸ್ಥೆಯ ಆರ್ಥಿಕ ಶಿಸ್ತನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ

ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್‌ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಮಾತನಾಡಿದರು. ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ, ಸಂಸದ ಯದುವಿರ್ ಕೃಷ್ಣದತ್ತ ಚಾಮರಾಜ ಒಡೆಯರ್, ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಹಾಗೂ ವಿಜಯಾನಂದ ಟ್ರಾವೆಲ್ಸ್ ಎಂಡಿ ಶಿವ ಸಂಕೇಶ್ವರ ಇದ್ದರು.

- Advertisement -

Related news

error: Content is protected !!