Wednesday, August 19, 2026
spot_imgspot_img
spot_imgspot_img

ಕೋಲ್ಕತ್ತಾ: ದೇಹಾದ್ಯಂತ ತೀವ್ರ ಉರಿಯಿಂದ ಕೆರೆಯಲ್ಲೇ ಇರುತ್ತಿದ್ದ ಬಾಲಕ – ವೈದ್ಯಕೀಯ ನೆರವಿಗೆ ಮುಂದಾದ ಅನಂತ್ ಅಂಬಾನಿ

- Advertisement -
- Advertisement -

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಇಕ್ಬಾಲ್ ಶೇಖ್ ವಿಚಿತ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ದೇಹದಾದ್ಯಂತ ತೀವ್ರ ಉರಿ ಕಾಣಿಸಿಕೊಳ್ಳುವ ಕಾರಣ ಗಂಟೆಗಟ್ಟಲೆ ಕೆರೆಯ ನೀರಿನಲ್ಲಿ ಮುಳುಗಿ ಇರುತ್ತಿದ್ದ. ಈ ಪ್ರಕರಣದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಉದ್ಯಮಿ ಅನಂತ್ ಅಂಬಾನಿ ಈತನ ನೆರವಿಗೆ ಬಂದಿದ್ದು, ಇದೀಗ ಇಕ್ಬಾಲ್‌ನನ್ನು ಚಿಕಿತ್ಸೆಗಾಗಿ ಮುಂಬೈಗೆ ಏರ್‌ಲಿಫ್ಟ್ ಮಾಡಲಾಗಿದೆ.

ಅನಂತ್ ಅಂಬಾನಿ ಅವರು ಇಕ್ಬಾಲ್‌ನ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ಸಹಾಯ ಕೋರಿ ಮಾಡಿದ್ದ ಮನವಿಯನ್ನು ಗಮನಿಸಿ, ಬಾಲಕನ ಚಿಕಿತ್ಸೆಗೆ ನೆರವು ನೀಡಲು ಮುಂದಾದ ಅವರು, ಆತನನ್ನು ಮುಂಬೈನ ಸರ್ ಹೆಚ್.ಎನ್.ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ.

ಆಸ್ಪತ್ರೆಯಲ್ಲಿ ಇಕ್ಬಾಲ್‌ನ ಆರೋಗ್ಯ ಸ್ಥಿತಿಯನ್ನು ವೈದ್ಯರು ಸಮಗ್ರವಾಗಿ ಪರಿಶೀಲಿಸಲಿದ್ದಾರೆ. ದೇಹದಾದ್ಯಂತ ಉರಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದನ್ನು ಪತ್ತೆಹಚ್ಚಲು ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ, ಅಗತ್ಯವಿರುವ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಇಕ್ಬಾಲ್‌ನ ಕುಟುಂಬವು ಆತನಿಗೆ ದೀರ್ಘಕಾಲದಿಂದ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ಹೇಳಿದೆ. ಈ ಹಿಂದೆ ಹಲವು ಬಾರಿ ಆಸ್ಪತ್ರೆಗೆ ಕರೆದೊಯ್ದಿದ್ದರೂ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿರಲಿಲ್ಲ. ಮುಂದುವರಿದ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಸಾಧ್ಯವಾಗದ ಕಾರಣ ಕುಟುಂಬವು ಸಾರ್ವಜನಿಕರಿಂದ ಸಹಾಯ ಕೋರಿತ್ತು.

ಇಕ್ಬಾಲ್‌ನ ವಿಚಿತ್ರ ಸ್ಥಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೋವೊಂದರಿಂದ ಬೆಳಕಿಗೆ ಬಂದಿದ್ದು, ವೀಡಿಯೋದಲ್ಲಿ ಬಾಲಕ ಕೆರೆಯ ನೀರಿನಲ್ಲಿ ಕುಳಿತುಕೊಂಡೇ ಉಪಾಹಾರ ಸೇವಿಸುತ್ತಿರುವುದು ಕಂಡುಬಂದಿತ್ತು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವರದಿಗಳ ಪ್ರಕಾರ, ಇಕ್ಬಾಲ್ ನೀರಿನಿಂದ ಹೊರಬಂದ ತಕ್ಷಣ ದೇಹದಾದ್ಯಂತ ತೀವ್ರ ಸುಡುವ ಅನುಭವವಾಗುತ್ತದೆ ಎಂದು ಹೇಳುತ್ತಿದ್ದ. ಹೀಗಾಗಿ ಆತ ಗಂಟೆಗಟ್ಟಲೆ ಕೆರೆಯಲ್ಲೇ ಮುಳುಗಿ ಇರುತ್ತಿದ್ದ. ಕೆಲವೊಮ್ಮೆ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ತೆರಳಿ ಅಲ್ಲಿಯೇ ಸಮಯ ಕಳೆಯುತ್ತಿದ್ದ ಎನ್ನಲಾಗಿದೆ. ಇಕ್ಬಾಲ್ ತನ್ನ ಮೇಲೆ ಯಾವುದೋ ಅತೀಂದ್ರಿಯ ಶಕ್ತಿ ಆವರಿಸಿಕೊಂಡಿರುವಂತೆ ಭಾಸವಾಗುತ್ತದೆ ಎಂದೂ ಹೇಳಿಕೊಂಡಿದ್ದಾನೆ. ಆದರೆ ಆತನಿಗೆ ಇಂತಹ ಅನುಭವ ಉಂಟಾಗಲು ನಿಖರವಾದ ವೈದ್ಯಕೀಯ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಸ್ಥಳೀಯ ನಿವಾಸಿಗಳ ಪ್ರಕಾರ, ಇಕ್ಬಾಲ್ ಬೆಳಗ್ಗೆಯಿಂದ ತಡರಾತ್ರಿಯವರೆಗೂ ಕೆರೆಗಳಲ್ಲಿ ಈಜುತ್ತಿರುವುದು ಅಥವಾ ನೀರಿನಲ್ಲಿ ಕುಳಿತಿರುವುದು ಸಾಮಾನ್ಯವಾಗಿತ್ತು. ಕೆಲ ಸಂದರ್ಭಗಳಲ್ಲಿ ಆತ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ತೆರಳುತ್ತಿದ್ದುದನ್ನೂ ಸ್ಥಳೀಯರು ಗಮನಿಸಿದ್ದರು.

ವೀಡಿಯೋ ವೈರಲ್ ಆದ ಬಳಿಕ ವೈದ್ಯಕೀಯ ತಜ್ಞರ ತಂಡ ಇಕ್ಬಾಲ್‌ನ ಪ್ರಕರಣವನ್ನು ಪರಿಶೀಲಿಸಿತು. ನಂತರ ಅನಂತ್ ಅಂಬಾನಿ ಅವರ ಮಧ್ಯಪ್ರವೇಶದಿಂದ ಬಾಲಕನನ್ನು ಹೆಚ್ಚಿನ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ವಿಮಾನದ ಮೂಲಕ ಮುಂಬೈಗೆ ಕರೆದೊಯ್ಯಲಾಯಿತು.

ಇಕ್ಬಾಲ್‌ಗೆ ನೀರಿನಲ್ಲಿ ಇರುವುದರಿಂದ ತಾತ್ಕಾಲಿಕವಾಗಿ ಉರಿ ಕಡಿಮೆಯಾಗುತ್ತಿರುವ ಅನುಭವವಾಗಬಹುದು. ಆದರೆ ಗಂಟೆಗಟ್ಟಲೆ ನೀರಿನಲ್ಲಿ ಮುಳುಗಿರುವುದು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ದೀರ್ಘಕಾಲ ನೀರಿನಲ್ಲಿ ಇರುವುದರಿಂದ ಚರ್ಮ ಮೃದುವಾಗಿ ಬಿಳಿಯಾಗಬಹುದು. ಇದರಿಂದ ಚರ್ಮದ ನೈಸರ್ಗಿಕ ರಕ್ಷಣಾ ಪದರ ದುರ್ಬಲವಾಗಿ, ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಬಹುದು ಎಂದು ವೈದರು ಹೇಳಿದ್ದಾರೆ.

ಮುಂಬೈನ ಸರ್ ಹೆಚ್.ಎನ್.ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ವೈದ್ಯರು ಇಕ್ಬಾಲ್‌ನ ಆರೋಗ್ಯ ಸ್ಥಿತಿಯನ್ನು ವಿವರವಾಗಿ ಪರಿಶೀಲಿಸಲಿದ್ದಾರೆ. ಪರೀಕ್ಷೆಗಳ ಫಲಿತಾಂಶದ ಆಧಾರದ ಮೇಲೆ ಮುಂದಿನ ಚಿಕಿತ್ಸಾ ಕ್ರಮವನ್ನು ನಿರ್ಧರಿಸಲಾಗುತ್ತದೆ. . ಇಕ್ಬಾಲ್‌ನ ನಿಖರ ಆರೋಗ್ಯ ಸಮಸ್ಯೆ ಏನು ಎಂಬುದು ವೈದ್ಯಕೀಯ ಪರೀಕ್ಷೆಗಳ ಬಳಿಕ ಸ್ಪಷ್ಟವಾಗಬೇಕಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!