



ಪುತ್ತೂರು: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕ್-ಅಪ್ ವಾಹನವನ್ನು ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಆದಿತ್ಯವಾರ (ಆ.23) ಬೆಳಿಗ್ಗೆ ಆನಡ್ಕ ಕಡೆಯಿಂದ ಪಡೀಲ್ ಕಡೆಗೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪುತ್ತೂರು ನಗರ ಠಾಣೆಯ ಪಿಎಸ್ಐ ಸುರೇಶ್ ಸಿ.ಟಿ ಅವರು ಸಿಬ್ಬಂದಿಗಳೊಂದಿಗೆ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಬಳಿ ದಾಳಿ ನಡೆಸಿದ್ದಾರೆ.
ಈ ವೇಳೆ KA 19 D 0948 ನೋಂದಣಿಯ ಪಿಕ್-ಅಪ್ ವಾಹನವನ್ನು ತಡೆದು ಪರಿಶೀಲಿಸಿದಾಗ, ವಾಹನದಲ್ಲಿ ಮೂರು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಪತ್ತೆಯಾಗಿದೆ.
ವಾಹನ ಚಾಲಕ ಮಹಮ್ಮದ್ ಜಬ್ಬಾರ್ ಎಂಬಾತನನ್ನು ವಿಚಾರಿಸಿದಾಗ, ಶಾಂತಿಗೋಡು ಗ್ರಾಮದ ಅಶೋಕ್ ಎಂಬವರಿಂದ ಜಾನುವಾರುಗಳನ್ನು ಖರೀದಿಸಿ, ಯಾವುದೇ ಪರವಾನಿಗೆ ಇಲ್ಲದೆ ವಧೆ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ.
ಕೂಡಲೇ ಜಾನುವಾರುಗಳನ್ನು ರಕ್ಷಿಸಿ, ವಾಹನ ಮತ್ತು ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ 101/2026, ಕಲಂ 11(D) ಪ್ರಾಣಿ ಹಿಂಸಾ ಕಾಯ್ದೆ, ಕಲಂ 4,5,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಹಾಗೂ 66 R/w 192(A) IMV Act ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.








