
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನೀಡಲಾಗಿದ್ದ ಸಾರ್ವತ್ರಿಕ ರಜೆಯಲ್ಲಿ ಬದಲಾವಣೆ ಮಾಡಲಾಗಿದೆ.
ಆ.26ರ ಬುಧವಾರದ ಬದಲು ಆ.25ರ ಮಂಗಳವಾರದಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾರ್ವತ್ರಿಕ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶಿಸಿದೆ.2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಂತೆ ಆ.26ರಂದು ಈದ್ ಮಿಲಾದ್ ಹಬ್ಬದ ರಜೆ ಘೋಷಿಸಲಾಗಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದ್ ಮಿಲಾದ್ ಹಬ್ಬವನ್ನು ಆ.26ರ ಬದಲಾಗಿ ಆ.25ರಂದು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ರಜೆ ಬದಲಾಯಿಸುವಂತೆ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಇದರಂತೆ ಸರ್ಕಾರದ ಆದೇಶದನ್ವಯ ಆ.26ರ ಬುಧವಾರದ ಸಾರ್ವತ್ರಿಕ ರಜೆಯನ್ನು ರದ್ದುಗೊಳಿಸಿ, ಆ.25ರ ಮಂಗಳವಾರವನ್ನು ಸಾರ್ವತ್ರಿಕ ರಜೆಯಾಗಿ ಘೋಷಿಸಲಾಗಿದೆ.
ಆ.26ರ ಬುಧವಾರವನ್ನು ಕರ್ತವ್ಯದ ದಿನವೆಂದು ಪರಿಗಣಿಸುವಂತೆ ಸೂಚಿಸಲಾಗಿದೆ.ಆದಾಗ್ಯೂ, ಈಗಾಗಲೇ ಪೂರ್ವನಿಗದಿಯಾಗಿರುವ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪರೀಕ್ಷೆಗಳಿಗೆ ಈ ರಜೆ ಬದಲಾವಣೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.








