ಪುತ್ತೂರು: ತಾನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು, ಗಾಂಜಾ ಪ್ರಕರಣದ ಕಥೆ ಹೆಣೆದು ಜ್ಯೂಸ್ ಅಂಗಡಿಯ ಯುವತಿಯನ್ನು ನಂಬಿಸಿ ₹3,500 ನಗದು ಪಡೆದು ವ್ಯಕ್ತಿಯೊಬ್ಬ ಪರಾರಿಯಾದ ಘಟನೆ ಆ.30ರಂದು ಬೆಳಗ್ಗೆ ಕುಂಬ್ರದಲ್ಲಿ ನಡೆದಿದೆ.

ಕುಂಬ್ರದ ಜ್ಯೂಸ್ ಮತ್ತು ಚಾಟ್ಸ್ ಅಂಗಡಿಗೆ ವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿ, ತಾನು ಪೊಲೀಸ್ ಇಲಾಖೆಯವನೆಂದು ಯುವತಿಗೆ ಪರಿಚಯಿಸಿಕೊಂಡಿದ್ದಾನೆ. ಕುಂಬ್ರ ಕಟ್ಟೆಯ ಬಳಿ ಪೊಲೀಸ್ ಜೀಪು ನಿಂತಿದ್ದು, ಗಾಂಜಾ ದಂಧೆಕೋರರನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾನೆ. ಕಾರ್ಯಾಚರಣೆಯಲ್ಲಿ ಗಾಂಜಾ ಸಿಕ್ಕರೆ ಹಣ ಹಾಗೂ ಐಫೋನ್ ಮೊಬೈಲ್ಗಳು ದೊರೆಯಲಿವೆ ಎಂದು ಹೇಳಿ ಯುವತಿಯನ್ನು ನಂಬಿಸುವ ಪ್ರಯತ್ನ ಮಾಡಿದ್ದಾನೆ.
ಬಳಿಕ ಯುವತಿಯ ಊರು ಹಾಗೂ ಮನೆಯ ವಿಳಾಸ ವಿಚಾರಿಸಿದ ಆತ, ಆಕೆಯ ತಂದೆ ಮತ್ತು ಭಾವ ತನಗೆ ಪರಿಚಯವಿದ್ದಾರೆ ಎಂದು ಹೇಳಿ ಮತ್ತಷ್ಟು ನಂಬಿಕೆ ಗಳಿಸಿದ್ದಾನೆ. ಇದೇ ಸಂದರ್ಭ ವಶಪಡಿಸಿಕೊಂಡಿರುವ ಐಫೋನ್ ಇದೆ, ಬೇಕಾದರೆ ಕೊಡಿಸುವುದಾಗಿ ಆಮಿಷವೊಡ್ಡಿದ್ದಾನೆ.ಇದಾದ ಬಳಿಕ ತುರ್ತಾಗಿ ₹3,500 ಹಣ ಬೇಕೆಂದು ಯುವತಿಯಲ್ಲಿ ಕೇಳಿದ್ದಾನೆ. ಯುವತಿ ಗೂಗಲ್ ಪೇ ಮೂಲಕ ಹಣ ನೀಡುವುದಾಗಿ ಹೇಳಿದಾಗ, ನಗದು ಹಣವೇ ಬೇಕೆಂದು ಆತ ಒತ್ತಾಯಿಸಿದ್ದಾನೆ. ಇದನ್ನು ನಂಬಿದ ಯುವತಿ ₹3,500 ನಗದನ್ನು ಆತನಿಗೆ ನೀಡಿದ್ದಾಳೆ.ಹಣ ಪಡೆದ ಬಳಿಕ ಪೊಲೀಸ್ ಜೀಪ್ ಇರುವುದಾಗಿ ಹೇಳಿದ ಸ್ಥಳಕ್ಕೆ ತೆರಳಿ ಬರುವುದಾಗಿ ತಿಳಿಸಿ ಬೈಕ್ನಲ್ಲಿ ಪರಾರಿಯಾಗಿದ್ದಾನೆ.
ಬಹಳ ಸಮಯವಾದರೂ ಆತ ಹಿಂದಿರುಗದ ಹಿನ್ನೆಲೆಯಲ್ಲಿ ಅನುಮಾನಗೊಂಡ ಯುವತಿ ಕುಂಬ್ರ ಕಟ್ಟೆಯ ಬಳಿ ತೆರಳಿ ಪರಿಶೀಲಿಸಿದಾಗ ಅಲ್ಲಿ ಯಾವುದೇ ಪೊಲೀಸ್ ಜೀಪ್ ಇರಲಿಲ್ಲ. ತಾನು ವಂಚನೆಗೆ ಒಳಗಾಗಿರುವುದು ಬಳಿಕ ಆಕೆಗೆ ತಿಳಿದುಬಂದಿದೆ.ಪೊಲೀಸರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಯುವತಿಯನ್ನು ವಂಚಿಸಿದ ವ್ಯಕ್ತಿಯ ಪತ್ತೆಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅಪರಿಚಿತರು ಪೊಲೀಸ್ ಅಥವಾ ಇತರ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಹಣ ಅಥವಾ ಇತರ ವಸ್ತುಗಳನ್ನು ಕೇಳಿದಾಗ, ಅವರ ಗುರುತು ಹಾಗೂ ಮಾಹಿತಿಯನ್ನು ಪರಿಶೀಲಿಸದೆ ಯಾವುದೇ ಹಣ ನೀಡಬಾರದು ಎಂದು ಸಾರ್ವಜನಿಕರು ಎಚ್ಚರಿಕೆ ವಹಿಸುವ ಅಗತ್ಯವಿದೆ.







