




ಸುಳ್ಯ: ತಾಲೂಕಿನ ತೊಡಿಕಾನ ಗ್ರಾಮದ ಬಾಳೆಕಜೆ ದಿ. ಆನಂದ ಅವರ ಪುತ್ರ ನಿರಂಜನಾಕ್ಷ (47) ಅವರು ಮರ ಕತ್ತರಿಸುವ ವೇಳೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೆ.7ರಂದು ನಡೆದಿದೆ.
ತೊಡಿಕಾನ ಮೂಲದ ನಿರಂಜನ್ ಅವರು ಬೆಳಿಗ್ಗೆ ಕಲ್ಲುಗುಂಡಿಯಲ್ಲಿ ರಬ್ಬರ್ ಮರ ಕತ್ತರಿಸುವ ಕೆಲಸಕ್ಕೆ ತೆರಳಿದ್ದರು. ಕೆಲಸ ಆರಂಭಿಸಿದ ಸ್ವಲ್ಪ ಹೊತ್ತಿನಲ್ಲೇ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಅವರನ್ನು ರಿಕ್ಷಾದಲ್ಲಿ ಕಲ್ಲುಗುಂಡಿಯ ಕ್ಲಿನಿಕ್ಗೆ ಕರೆತರಲಾಯಿತು.
ಅಲ್ಲಿ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಕಲ್ಲುಗುಂಡಿ ಆಂಬ್ಯುಲೆನ್ಸ್ನಲ್ಲಿ ಸುಳ್ಯಕ್ಕೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.
ಸ್ಥಳೀಯರು ಅಸ್ವಸ್ಥಗೊಂಡ ನಿರಂಜನ್ ಅವರಿಗೆ ಸಿಪಿಆರ್ ನೀಡಿ ಜೀವ ಉಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಮೃತರು ನುರಿತ ಮರ ಕಟಾವು ಕಾರ್ಮಿಕರಾಗಿದ್ದರು.
ಸಾವಿನ ನಿಖರ ಕಾರಣ ವೈದ್ಯಕೀಯ ವರದಿ ಬಳಿಕ ತಿಳಿದುಬರಲಿದೆ. ಮೃತರು ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಸಹೋದರ-ಸಹೋದರಿಯನ್ನು ಅಗಲಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.








