




ಆನೇಕಲ್: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಸಿದ್ದ ಮೊಬೈಲ್‌ನ ಸೀಕ್ರೆಟ್ ಬಯಲಾಗಿದೆ. ಕಳ್ಳಾಟಕ್ಕೆ ಸಾಥ್ ಕೊಟ್ಟಿದ್ದ ಏಳು ಜನರ ವಿರುದ್ಧ ಕೇಸ್ ದಾಖಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಸಿಕ್ಕ ಬಳಿಕ ಪೊಲೀಸರು ಮೊಬೈಲ್ ಹಾಗೂ ಸಿಮ್ ಕಾರ್ಡ್‌ನ ಮೂಲವನ್ನು ಪತ್ತೆ ಹಚ್ಚಿದಾಗ ಡಿಜೆ ಹಳ್ಳಿಯ ಲಿಂಕ್ ಸಿಕ್ಕಿತ್ತು. ಇದೀಗ ಈ ಸಂಬಂಧ ಪ್ರತಾಪ್ ರಾವ್, ತೌಸಿಪ್, ಸಿದ್ದಿಕ್, ಪ್ರಕಾಶ್, ಮಂಜುನಾಥ್ ಸೇರಿ ಏಳು ಜನರ ವಿರುದ್ಧ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅತ್ಯಾಚಾರ ಕೇಸ್‌ನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಿನ ಬ್ಯಾರೇಕ್‌ನಲ್ಲಿ ಮೊಬೈಲ್ ಬಳಸಿ ಲಾಕ್ ಆಗಿದ್ದರು. ಪ್ರಜ್ವಲ್‌ಗೆ ಮೊಬೈಲ್ ಸಿಗೋದಕ್ಕೆ ಜೈಲ್ ವಾರ್ಡನ್ ಹಾಗೂ ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣ ಆರೋಪಿಗಳಾದ ಸಿದ್ದಿಕ್ ಹಾಗೂ ತೌಫಿಕ್ ಸಾಥ್ ನೀಡಿದ್ದರು. ಜೈಲಿನಲ್ಲಿ ಪರಿಚಯವಾಗಿದ್ದ ತೌಫಿಕ್ ಅನಾರೋಗ್ಯದಿಂದ ಜಯನಗರ ಆಸ್ಪತ್ರೆ ಸೇರಿದ್ದ ಆಗ ಮೊಬೈಲ್ ಖರೀದಿ ಮಾಡಿದ್ದ. ನಂತರ ಸಿದ್ದಿಕ್ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು ಜೈಲಿನಲ್ಲಿ ಯೂಸ್ ಮಾಡ್ತಿದ್ದರು. ಇವರ ಬಳಿ ಪ್ರಜ್ವಲ್ ಒಂದು ಲಕ್ಷ ರೂ.ಗೆ ಮೊಬೈಲ್, 50 ಸಾವಿರ ರೂ.ಗೆ ಸಿಮ್ ಕಾರ್ಡ್ ಖರೀದಿಸಿದ್ದಾರೆ ಎನ್ನಲಾಗಿದೆ.
ಈ ಸಿಮ್ ಆಂಧ್ರದ ಪುಂಗನೂರಿನಲ್ಲಿ ಖರೀದಿ ಮಾಡಿರೋದು ಪತ್ತೆಯಾಗಿದೆ. ಇದರ ಕಾಲ್ ಡಿಟೇಲ್ಸ್ ಚೆಕ್ ಮಾಡಿದಾಗ ಹಲವು ಯುವತಿಯರಿಗೆ, ಕುಟುಂಬಸ್ಥರಿಗೆ ಕರೆ ಮಾಡಿರೋದು ಬೆಳಕಿಗೆ ಬಂದಿದೆ. ಇದೀಗ ಕರೆ ಮಾಡಿ, ಮಾತನಾಡಿದವರಿಗೆ ನೋಟಿಸ್ ನೀಡಿ, ವಿಚಾರಣೆಗೆ ಕರೆಯೋ ಸಾಧ್ಯತೆಯಿದೆ.
ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಇನ್ನು ತನಿಖೆಯ ವೇಳೆ ಜೈಲಿನಲ್ಲಿ ಸಂಗ್ರಹಿಸಿದ್ದ ಎನ್ನಲಾದ ಸುಮಾರು 173 ಅಶ್ಲೀಲ ವಿಡಿಯೋಗಳು ಕೂಡ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಈ ವಿಡಿಯೋಗಳ ಕುರಿತು ಕೂಡ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನೊಳಗೆ ಮೊಬೈಲ್ ಹೇಗೆ ಪ್ರವೇಶಿಸಿತು, ಯಾರ್ಯಾರು ಸಹಕರಿಸಿದ್ದರು ಹಾಗೂ ಮೊಬೈಲ್ ಬಳಕೆಯ ಸಂದರ್ಭದಲ್ಲಿ ಯಾರೊಂದಿಗೆ ಸಂಪರ್ಕ ಹೊಂದಲಾಗಿತ್ತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.








