Saturday, September 12, 2026
spot_imgspot_img
spot_imgspot_img

ವಿದೇಶಿ ಅಕ್ರಮ ಹೂಡಿಕೆ ಆರೋಪ: ಸತೀಶ್ ಜಾರಕಿಹೊಳಿಗೆ ಸೇರಿದ 3.3 ಕೋಟಿ ರೂ.ನಗದು, ವಿದೇಶಿ ಹಣ ಜಪ್ತಿ- ಈ.ಡಿ

- Advertisement -
- Advertisement -

ಬೆಂಗಳೂರು : ವಿದೇಶಿ ಅಕ್ರಮ ಹೂಡಿಕೆಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರಿಗೆ ಸಂಬಂಧಿಸಿದ 21 ಸ್ಥಳಗಳಲ್ಲಿ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ(ಈ.ಡಿ.) ಅಧಿಕಾರಿಗಳು, ಸುಮಾರು 3.3 ಕೋಟಿ ರೂ. ನಗದು ಹಾಗೂ ಸುಮಾರು 15 ಲಕ್ಷ ರೂ.ಮೌಲ್ಯದ ಯುಎಸ್ ಡಾಲರ್ ಮತ್ತು ಯುರೋ ಸೇರಿ ವಿದೇಶಿ ಹಣವನ್ನು ಜಪ್ತಿ ಮಾಡಿದ್ದಾರೆ.

ಸೆ.9 ಮತ್ತು 10ರಂದು ಈ.ಡಿ. ಅಧಿಕಾರಿಗಳು ‘ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಎಫ್‌ಇಎಂಎ) ಅಡಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಚಿಕ್ಕೋಡಿ ಸಂಸದೆ ಹಾಗೂ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್‌ ಜಾರಕಿಹೊಳಿ ಮತ್ತು ಅವರ ಭಾವ ವೈ.ಡಿ. ಮಂಜುನಾಥ್ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದರ ಜೊತೆಗೆ, ಸತೀಶ್ ಜಾರಕಿಹೊಳಿ ಅವರ ಆಪ್ತ ಸಹಾಯಕರು ಮತ್ತು ಅಧಿಕಾರಿಗಳಾದ ಮಲಗೌಡ ಪಾಟೀಲ್‌, ರಾಜು ದಾರಗಶೆಟ್ಟಿ, ವಿಠಲ ಪ್ರಸನ್ನವರ್ ಮತ್ತು ಡಾ. ಗಿರೀಶ್ ಸೋನವಾಲ್ಕರ್ ಸೇರಿದಂತೆ ಹಲವರ ಆಸ್ತಿಗಳನ್ನು ಪರಿಶೀಲಿಸಲಾಗಿತ್ತು ಎನ್ನಲಾಗಿದೆ.

ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಮತ್ತು ಅವರ ಸಹೋದರಿ ಮಹಾದೇವಿ ಮಂಜುನಾಥ್ ಅವರು ಕಾಂಗೋದ ‘ಎಲ್ಲೊರಾಡೊ ಮೈನಿಂಗ್ ರಿಸೋರ್ಸಸ್’ ಮತ್ತು ಜಾಂಬಿಯಾದ ‘ನವ ಔರಮ್ ಮೈನಿಂಗ್ ಲಿಮಿಟೆಡ್’ ಮುಂತಾದ ಹಲವಾರು ವಿದೇಶಿ ಸಂಸ್ಥೆಗಳಲ್ಲಿ ಷೇರುಗಳನ್ನು ಹೊಂದಿದ್ದಾರೆ ಎಂದು ಪರಿಶೀಲನೆಯಲ್ಲಿ ತಿಳಿದು ಬಂದಿರುವುದಾಗಿ ಈ.ಡಿ. ಅಧಿಕಾರಿಗಳು ಹೇಳಿದ್ದಾರೆ.

ಚಿನ್ನದ ಗಣಿಗಾರಿಕೆಯಲ್ಲಿ ತೊಡಗಿರುವ ಕಾಂಗೋದ ‘ಮ್ಯಾಗ್ನಿಟ್ಯೂಡ್ ಸ್ಟಾರ್’ ಕಂಪೆನಿಯಲ್ಲಿ ಸತೀಶ್ ಜಾರಕಿಹೊಳಿ ಅವರು ಸುಮಾರು ಶೇ.40ರಷ್ಟು ಷೇರುಗಳನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಆಫ್ರಿಕಾದಲ್ಲಿ ಗಣಿಗಾರಿಕೆ ಆಸ್ತಿಗಳನ್ನು ಹೊಂದಿರುವ ಇತರ ವಿವಿಧ ವಿದೇಶಿ ಸಂಸ್ಥೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ ಎಂದು ಈ.ಡಿ. ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!