

ಮಂಗಳೂರು: 2017ರ ಸೆ.11ರಂದು ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾ ಬಂಧಿಗಳಾಗಿದ್ದ ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಮೇಲೆ ನಡೆದ ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ 16 ಮಂದಿ ಆರೋಪಿಗಳ ವಿರುದ್ಧ ದೋಷಾರೋಪಣೆ ಸಲ್ಲಿಸಲಾಗಿತ್ತು.




ಜೈಲಿನ ‘ಬಿ’ ಬ್ಲಾಕ್ ವರಾಂಡದಲ್ಲಿ ಇಬ್ಬರ ಮೇಲೆ ಕೈಯಿಂದ ಹಾಗೂ ಕಾಲಿನಿಂದ ಹಲ್ಲೆ ನಡೆಸಿ, ನವನೀತ್ ಶೆಟ್ಟಿ ಅವರಿಗೆ ಪೈಪ್ ಮತ್ತು ಸ್ಟೀಲ್ ಡ್ರಂನಿಂದ ಹೊಡೆದು ಗಾಯಗೊಳಿಸಲಾಗಿತ್ತು. ಅಲ್ಲದೆ, ಕೇರಂ ಬೋರ್ಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಲು ಯತ್ನಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಹಲ್ಲೆ ತಡೆಯಲು ಬಂದ ಜೈಲು ಸಿಬ್ಬಂದಿಯ ಕರ್ತವ್ಯಕ್ಕೂ ಆರೋಪಿಗಳು ಅಡ್ಡಿಪಡಿಸಿದ್ದರು. ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣವನ್ನು ಒಪ್ಪಿಕೊಳ್ಳುವಂತೆ ಬೆದರಿಸಿ, ₹5 ಲಕ್ಷ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.ವೈದ್ಯಕೀಯ ದಾಖಲೆ ಹಾಗೂ ತನಿಖೆಯಿಂದ ಆರೋಪಗಳು ದೃಢಪಟ್ಟಿದ್ದು, ಪ್ರಕರಣದಲ್ಲಿ 14 ಮಂದಿ ಆರೋಪಿಗಳು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ.
ಈ ಪೈಕಿ ಮೂವರು ಈಗಾಗಲೇ ಇತರ ಪ್ರಕರಣಗಳಲ್ಲಿ ಜೈಲಿನಲ್ಲಿದ್ದು, 10 ಮಂದಿಯನ್ನು ನಿನ್ನೆ ನ್ಯಾಯಾಲಯದ ಆದೇಶದಂತೆ ವಶಕ್ಕೆ ಪಡೆಯಲಾಗಿದೆ. ಸೆ.16ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.







