Sunday, September 13, 2026
spot_imgspot_img
spot_imgspot_img

ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆಯ ವಯಸ್ಸಿನ ಪುರಾವೆಗೆ ಬ್ಯಾಪ್ಟಿಸಮ್ ಸರ್ಟಿಫಿಕೇಟ್ ಮಾನ್ಯವಲ್ಲ: ಸುಪ್ರೀಂ ಕೋರ್ಟ್

- Advertisement -
- Advertisement -

ಹೊಸದಿಲ್ಲಿ: ಪೊಕ್ಸೆ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಕೇವಲ ಬ್ಯಾಪ್ಟಿಸಮ್ (ಕ್ರೈಸ್ತ ಧರ್ಮದಲ್ಲಿಯ ದೀಕ್ಷಾಸ್ನಾನ) ಪ್ರಮಾಣಪತ್ರವೊಂದೇ ಸಂತ್ರಸ್ತೆಯ ವಯಸ್ಸಿಗೆ ಮಾನ್ಯವಾದ ಪುರಾವೆಯಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ಬಾಲನ್ಯಾಯ ಕಾಯ್ದೆಯಡಿ ನಿಗದಿಪಡಿಸಲಾದ ದಾಖಲೆಗಳ ಅನುಕ್ರಮವನ್ನು ನ್ಯಾಯಾಲಯಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅದು ಹೇಳಿದೆ.

ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತೆಯ ವಯಸ್ಸನ್ನು ನಿರ್ಧರಿಸಲು ಶಾಲೆಯ ದಾಖಲಾತಿ ಅಥವಾ ಮೆಟ್ರಿಕ್ಯುಲೇಷನ್ ಪ್ರಮಾಣಪತ್ರದ ಜನ್ಮದಿನಾಂಕಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾ‌ರ್ ಮಿಶ್ರಾ ಮತ್ತು ಎನ್‌.ವಿ.ಅಂಜಾರಿಯಾ ಅವರ ಪೀಠವು ಹೇಳಿದೆ.

ಅಂತಹ ದಾಖಲೆಗಳ ಅನುಪಸ್ಥಿತಿಯಲ್ಲಿ ಕಾರ್ಪೊರೇಷನ್, ನಗರ ಪ್ರಾಧಿಕಾರ ಅಥವಾ ಪಂಚಾಯತ್ ನೀಡಿರುವ ಜನನ ಪ್ರಮಾಣಪತ್ರವನ್ನು ಪರಿಗಣಿಸಬಹುದಾಗಿದೆ. ಈ ಯಾವುದೇ ದಾಖಲೆಗಳು ಲಭ್ಯವಿಲ್ಲದ ಸಂದರ್ಭದಲ್ಲಿ ಮಾತ್ರ ನ್ಯಾಯಾಲಯವು ಮೂಳೆಗಳ ಪರೀಕ್ಷೆ ಅಥವಾ ಇತರ ವೈದ್ಯಕೀಯವಾಗಿ ವಯಸ್ಸು ನಿರ್ಧರಿಸುವ ವಿಧಾನಗಳನ್ನು ಅವಲಂಬಿಸಬಹುದು ಎಂದು ಪೀಠವು ಸ್ಪಷ್ಟಪಡಿಸಿದೆ.

ಪೈನೈಮಾಲಂಗಕಿ ಬಾರೆಹ್ ಎಂಬ ವ್ಯಕ್ತಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು, ವಯಸ್ಸಿನ ಕುರಿತು ವಿವಾದವಿರುವಾಗ ಸಂತ್ರಸ್ತೆಯು ಬಾಲಕಿ ಎನ್ನುವುದನ್ನು ಸಾಬೀತುಪಡಿಸುವ ಅಗತ್ಯವನ್ನು ಪೊಕ್ಸೆ ಕಾಯ್ದೆಯ ಶಾಸನಬದ್ಧ ನಿಬಂಧನೆಗಳು ಮೀರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ ಲೈಂಗಿಕ ದೌರ್ಜನ್ಯದ ಸಾಬೀತಾದ ಕೃತ್ಯಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ.

ಬಾರೆಹ್ ಅಪರಾಧಿ ಎಂದು ಘೋಷಿಸಿದ್ದ ವಿಶೇಷ ಪೊಟ್ರೊ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲುಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಎತ್ತಿಹಿಡಿದಿದ್ದ ಮೇಘಾಲಯ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬಾರೆಹ್ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದ.

ನವೆಂಬರ್ 2019ರಲ್ಲಿ ದೂರು ಸಲ್ಲಿಸಿದ್ದ ಮಹಿಳೆಯೋರ್ವರು ಬಾರೆಹ್ ಸುತಂಗಾ ಗ್ರಾಮದಲ್ಲಿ ತನ್ನ 13ರ ಹರೆಯದ ಪುತ್ರಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದರು.

ಬಾಲನ್ಯಾಯ ಕಾಯ್ದೆ ಕಲಂ 94ರ ಪ್ರಕಾರ ಅಗತ್ಯವಿರುವ ಯಾವುದೇ ದಾಖಲೆಗಳನ್ನು ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಪರಿಣಾಮವಾಗಿ ಸಂತ್ರಸ್ತೆಯ ಅಪ್ರಾಪ್ತ ವಯಸ್ಸು ಕಾನೂನುಬದ್ಧವಾಗಿ ಸಾಬೀತಾಗಿಲ್ಲ ಎಂದು ತೀರ್ಪಿನಲ್ಲಿ ತಿಳಿಸಿರುವ ಸರ್ವೋಚ್ಚ ನ್ಯಾಯಾಲಯವು, ಪೊಕ್ಕೊ ಕಾಯ್ದೆಯ 3ರ ಅಡಿ ದೋಷಾರೋಪವನ್ನು ರದ್ದುಗೊಳಿಸಿತು. ಆದರೆ ಐಪಿಸಿ ಸೆಕ್ಷನ್ 376ರಡಿ ಅತ್ಯಾಚಾರವೆಂದು ಪರಿವರ್ತಿಸಿ 10 ವರ್ಷಗಳ ಕಠಿಣ ಜೈಲುಶಿಕ್ಷೆ ಮತ್ತು 10,000ರೂ.ದಂಡ ವಿಧಿಸಿ ಆದೇಶಿಸಿದೆ.

- Advertisement -

Related news

error: Content is protected !!