




ಬೆಳಗಾವಿ: ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಚಾವ್ಹಾಟ್ ಗಲ್ಲಿಯಲ್ಲಿ ನಡೆದಿದೆ.
ತಡರಾತ್ರಿ ಮನೆಯಲ್ಲಿ ಎಲ್ಲರೂ ನಿದ್ರಿಸುತ್ತಿದ್ದ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಕ್ಷಣಾರ್ಧದಲ್ಲಿ ಬೆಂಕಿ ಇಡೀ ಮನೆಗೆ ಆವರಿಸಿದೆ. ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿದ್ದು, ಮನೆಯಲ್ಲಿದ್ದವರು ಹೊರಬರಲಾರದೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಪ್ರಾಣಬಿಟ್ಟಿದ್ದಾರೆ.
ಗಜಾನನ ರಾಜಾರಾಮ ದಮೋನೆ(65), ಶಾರದಾ ದಮೋನೆ(45), ಭಾರತಿ ರಾಜಾರಾಮ ದಮೋನೆ(50), ರೋಷನ್ ಗಜಾನನ ದಮೋನೆ(21) ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಪ್ರಿಯಾ ಗಜಾನನ ದಮೋನೆ (28) ಹಾಗೂ ಗಂಗಾ ಗಜಾನನ ದಮೋನೆ (25) ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದೆ.
ಮೃತ ಕುಟುಂಬವು ದಿನಗೂಲಿ ಕೆಲಸ ಮಾಡಿಕೊಂಡು ಬಡತನದಲ್ಲಿ ಜೀವನ ಸಾಗಿಸುತ್ತಿತ್ತು. ಗಣೇಶ ಚತುರ್ಥಿಯ ದಿನವೇ ಇಡೀ ಕುಟುಂಬವೇ ಬೆಂಕಿಗೆ ಆಹುತಿಯಾಗಿರುವುದು ಇಡೀ ಬಡಾವಣೆಯಲ್ಲಿ ತೀವ್ರ ಶೋಕದ ಛಾಯೆ ಮೂಡಿಸಿದೆ. ಸ್ಥಳಕ್ಕೆ ಮಾರ್ಕೆಟ್ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.








