
ಹೊಸದಿಲ್ಲಿ: ಸ್ಪಷ್ಟವಾದ ಮಾನದಂಡಗಳ ಕೊರತೆಯಿದ್ದಾಗ, ಶಿವಸೇನೆಯ ‘ಬಿಲ್ಲು-ಬಾಣ’ ಚಿಹ್ನೆಯನ್ನು ಎರಡೂ ಪ್ರತಿಸ್ಪರ್ಧಿ ಬಣಗಳಿಗೆ ನೀಡದಿರುವ ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಭಾರತೀಯ ಚುನಾವಣಾ ಆಯೋಗವನ್ನು ಪ್ರಶ್ನಿಸಿದೆ.





ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ಕಾಲ್ಯ ಬಾಗ್ನಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠವು, ಶಿವಸೇನೆಯ ವಿಭಜನೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದೆ. ಇದರಲ್ಲಿ ಏಕನಾಥ್ ಶಿಂಧೆ ಬಣವನ್ನು ಅಧಿಕೃತ ಶಿವಸೇನೆ ಎಂದು ಗುರುತಿಸಿದ ECIಯ ನಿರ್ಧಾರ ಹಾಗೂ ಪಕ್ಷಾಂತರ ಮಾಡಿದ ಶಾಸಕರನ್ನು ಅನರ್ಹಗೊಳಿಸಲು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ನಿರಾಕರಿಸಿದ ವಿಚಾರವೂ ಸೇರಿದೆ.
ಶಿಂಧೆ ಬಣದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ನೀರಜ್ ಕಿಶನ್ ಕೌಲ್, ಬಹುಮತವನ್ನು ಚುನಾವಣಾ ಆಯೋಗ ಪರಿಗಣಿಸಿರುವುದನ್ನು ಸಮರ್ಥಿಸುತ್ತಿದ್ದ ವೇಳೆ ನ್ಯಾಯಾಲಯ ಈ ಪ್ರಶ್ನೆಯನ್ನು ಕೇಳಿದೆ.ಎಲ್ಲಾ ಮಾನದಂಡಗಳೂ ದೋಷಪೂರಿತವಾಗಿದ್ದರೆ, ಈ ಎರಡೂ ಗುಂಪುಗಳ ಪೈಕಿ ಯಾವುದಕ್ಕೂ ಅನುಕೂಲ ಕಲ್ಪಿಸದೆ ಇರಲು ಅವರಿಗೆ ಯಾವಾಗಲೂ ಅವಕಾಶವಿತ್ತು. ಅವರು ತಮ್ಮದೇ ಚಿಹ್ನೆಗಳನ್ನು ಆಯ್ಕೆ ಮಾಡಿಕೊಂಡು, ತಮ್ಮ ಸ್ವಂತ ಬಲದ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಲಿ, ಬಾಳಾಸಾಹೇಬ್ ಅವರ ಹೆಸರಿನ ಮೇಲೆ ಅಲ್ಲ ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು.
ಶಿವಸೇನೆಯ ಸಂಘಟನಾ ರಚನೆ ಹಾಗೂ ಪ್ರತಿಸ್ಪರ್ಧಿ ಬಣಗಳಿಗೆ ದೊರೆಯುತ್ತಿದ್ದ ಬೆಂಬಲವನ್ನು ಚುನಾವಣಾ ಆಯೋಗ ಪರಿಶೀಲಿಸಿತ್ತು. ಈ ವಿಶಿಷ್ಟ ಪರಿಸ್ಥಿತಿಯಲ್ಲಿ ಶಾಸಕಾಂಗದ ಬಹುಮತ ಕಾರ್ಯಸಾಧ್ಯವಾದ ಮಾನದಂಡ ಎಂದು ECI ನಿರ್ಧರಿಸಿತ್ತು ಎಂದು ಕೌಲ್ ವಾದಿಸಿದರು.







