
ಮಂಗಳೂರು: ತುಳು ಭಾಷೆಗೆ 2ನೇ ಅಧಿಕೃತ ರಾಜ್ಯ ಭಾಷೆಯ ಮಾನ್ಯತೆ ದೊರೆತಿರುವುದು ಕರಾವಳಿಯ ಜನರ ದಶಕಗಳ ಭಾವನಾತ್ಮಕ ಕನಸು ನನಸಾದ ಐತಿಹಾಸಿಕ ಕ್ಷಣವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬೊಂಡಾಲ ಚಿತ್ತರಂಜನ್ ಶೆಟ್ಟಿ ತಿಳಿಸಿದ್ದಾರೆ.
ತುಳುನಾಡು ಕೇವಲ ಭೌಗೋಳಿಕ ಪ್ರದೇಶವಲ್ಲ. ಭವ್ಯ ಸಂಸ್ಕೃತಿ, ದೈವಾರಾಧನೆ, ಯಕ್ಷಗಾನ ಹಾಗೂ ಭಾಷಿಕ ಸೌಹಾರ್ದತೆಯ ನೆಲೆಯಾಗಿದ್ದು, ಕರಾವಳಿಯ ಕಲೆ, ಆಚಾರ-ವಿಚಾರ ಮತ್ತು ಅಸ್ಮಿತೆಯ ಜೀವನಾಡಿಯಾಗಿರುವ ತುಳು ಭಾಷೆಗೆ ಸೂಕ್ತ ಗೌರವ ದೊರೆತಿರುವುದು ಪ್ರತಿಯೊಬ್ಬ ತುಳುವನಿಗೂ ಹೆಮ್ಮೆಯ ವಿಚಾರವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ತುಳು ಭಾಷೆಗೆ ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮಟ್ಟದಲ್ಲಿ ಬೆಂಬಲ ನೀಡಿದ ಡಿಕೆ ಶಿವಕುಮಾರ್, ಯು.ಟಿ. ಖಾದರ್, ಮಂಜುನಾಥ್ ಭಂಡಾರಿ, ಐವನ್ ಡಿಸೋಜ, ಪಿ.ವಿ. ಮೋಹನ್, ರಮಾನಾಥ ರೈ ಹಾಗೂ ಅಶೋಕ್ ಕುಮಾರ್ ರೈ ಅವರ ಕೊಡುಗೆ ಸ್ಮರಣೀಯವಾಗಿದೆ ಎಂದು ಅವರು ಹೇಳಿದ್ದಾರೆ.
ತುಳು ಭಾಷೆಯ ಮಾನ್ಯತೆಗಾಗಿ ವಿಧಾನ ಪರಿಷತ್ ಹಾಗೂ ಸಾರ್ವಜನಿಕ ವೇದಿಕೆಗಳಲ್ಲಿ ಧ್ವನಿ ಎತ್ತಿದ ಮಂಜುನಾಥ್ ಭಂಡಾರಿ, ರಾಜಕೀಯ ಮತ್ತು ಆಡಳಿತಾತ್ಮಕ ಮನ್ನಣೆಗಾಗಿ ನಿರಂತರವಾಗಿ ಪ್ರಯತ್ನಿಸಿದ ಐವನ್ ಡಿಸೋಜ, ತುಳು ಸಂಸ್ಕೃತಿ ಹಾಗೂ ಜನಪದದ ಉಳಿವಿಗಾಗಿ ಶ್ರಮಿಸಿದ ಪಿ.ವಿ. ಮೋಹನ್ ಮತ್ತು ರಮಾನಾಥ ರೈ, ಶಾಸನಸಭೆಯಲ್ಲಿ ತುಳು ಭಾಷೆಯ ಮಾನ್ಯತೆಯ ಅನಿವಾರ್ಯತೆಯನ್ನು ಪ್ರತಿಪಾದಿಸಿದ ಅಶೋಕ್ ಕುಮಾರ್ ರೈ ಅವರ ಪ್ರಯತ್ನಗಳನ್ನು ಅವರು ಶ್ಲಾಘಿಸಿದ್ದಾರೆ.
ಸಾಹಿತ್ಯ, ಕಲೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹೊಸ ಚೈತನ್ಯ
ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರೆತಿರುವುದು ಕೇವಲ ಆಡಳಿತಾತ್ಮಕ ನಿರ್ಧಾರವಲ್ಲ. ಇದರಿಂದ ತುಳು ಸಾಹಿತ್ಯ, ಜಾನಪದ, ಯಕ್ಷಗಾನ, ನಾಟಕ ಹಾಗೂ ಸಂಶೋಧನಾ ಕ್ಷೇತ್ರಗಳಿಗೆ ಹೊಸ ಚೈತನ್ಯ ದೊರೆಯಲಿದೆ. ಸರ್ಕಾರಿ ದಾಖಲೆಗಳು, ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತುಳುವಿಗೆ ಹೆಚ್ಚಿನ ಅವಕಾಶ ಸಿಗುವುದರಿಂದ ಮುಂದಿನ ಪೀಳಿಗೆಯಲ್ಲೂ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಬೊಂಡಾಲ ಚಿತ್ತರಂಜನ್ ಶೆಟ್ಟಿ ತಿಳಿಸಿದ್ದಾರೆ.
ಕರಾವಳಿಯ ದಶಕಗಳ ಬೇಡಿಕೆಗೆ ಸ್ಪಂದಿಸಿ ತುಳು ಭಾಷೆಗೆ ಗೌರವ ದೊರಕಿಸುವಲ್ಲಿ ಶ್ರಮಿಸಿದ ಎಲ್ಲ ನಾಯಕರಿಗೆ ತುಳುನಾಡಿನ ಸಮಸ್ತ ಜನರ ಪರವಾಗಿ ಕೃತಜ್ಞತೆ ಹಾಗೂ ಅಭಿನಂದನೆಗಳನ್ನು ಸಲ್ಲಿಸಿರುವ ಅವರು, “ತುಳು ಭಾಷೆ ಉಳಿಯಲಿ, ತುಳುನಾಡು ಬೆಳೆಯಲಿ” ಎಂದು ಶುಭ ಹಾರೈಸಿದ್ದಾರೆ.








