ಕುಂದಾಪುರ, ಎ.2: ಸಾಸ್ತಾನದಲ್ಲಿ ಯುವಕನನ್ನು ಅಪಹರಿಸಿ ಭಾರೀ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಏಳು ಆರೋಪಿಗಳನ್ನು ಬಂಧಿಸಿ, ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (KCOCA) ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

2025ರ ನವೆಂಬರ್ 19ರಂದು ಮಧ್ಯಾಹ್ನ ಸಾಸ್ತಾನದ ಕೋಸ್ಟಲ್ ಪ್ಯಾರಡೈಸ್ ಹೋಟೆಲ್ ಎದುರು ಸಿದ್ದಾಪುರ ನಿವಾಸಿ ಮೋಹನ ದಾಸ್ ಶೆಟ್ಟಿಯವರ ಪುತ್ರ ತೇಜಸ್ ಅವರನ್ನು ಅಪರಿಚಿತರು ಅಪಹರಿಸಿದ್ದರು. ಈ ಘಟನೆ ಬಗ್ಗೆ ತೇಜಸ್ ಸ್ನೇಹಿತ ಪ್ರಜ್ವಲ್ ನೀಡಿದ ಮಾಹಿತಿಯ ಆಧಾರದಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಆರೋಪಿಗಳು ವಾಟ್ಸ್ಆಪ್ ಕರೆಗಳ ಮೂಲಕ 50 ಲಕ್ಷದಿಂದ 3 ಕೋಟಿ ರೂ.ವರೆಗೆ ಹಣ ನೀಡುವಂತೆ ಬೆದರಿಕೆ ಹಾಕಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಪ್ರಕರಣ ದಾಖಲಿಸಿಕೊಂಡ ಕೋಟ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ, ಕೊಲ್ಲೂರು ಕೆಳಮನೆಯ ದೇವಿ ಪ್ರಸಾದ್ ಶೆಟ್ಟಿ @ ದೀಕ್ಷಿತ್ (33), ಹಿರಿಯಡ್ಕದ ಸುಜಿತ್ (27), ಕಾಟಿಪಳ್ಳದ ಸುದೀಪ್ (22), ಕೃಷ್ಣಾಪುರದ ಶ್ರೀಷಾ ಆನಂದ ಶೆಟ್ಟಿ (35), ಕೈಕಂಬದ ಮಿಥುನ್ (20), ಕೆಮ್ಮಣ್ಣಿನ ಸುಹಾಸ್ (31) ಹಾಗೂ ಹೂಡೆಯ ಮನೋಜ್ ವಿ. ಕೊಟ್ಯಾನ್ (34) ಅವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತನಿಖೆಯ ವೇಳೆ ಆರೋಪಿಗಳು ಸಂಘಟಿತವಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಪ್ರಕರಣಕ್ಕೆ KCOCA ಕಾಯ್ದೆಯನ್ನು ಅನ್ವಯಿಸಲಾಗಿದೆ. ಕುಂದಾಪುರ ಉಪವಿಭಾಗದ ಡಿವೈಎಸ್‌ಪಿ ಹೆಚ್.ಡಿ. ಕುಲಕರ್ಣಿ ಅವರ ನೇತೃತ್ವದಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ.
ಇನ್ನೂ ಪ್ರಕರಣದ ಪ್ರಮುಖ ಆರೋಪಿಗಳಾದ ಮನೋಜ್ ಕೋಡಿಕೆರೆ (42) ಹಾಗೂ ಚೇತನ್ ಪಡೀಲ್ (38) ಪರಾರಿಯಾಗಿದ್ದು, ಇವರ ಬಂಧನಕ್ಕಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇವರ ವಿರುದ್ಧ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುವುದಾಗಿ ತಿಳಿದುಬಂದಿದೆ.
ಆರೋಪಿಗಳ ಸುಳಿವು ನೀಡುವವರಿಗೆ ₹50,000 ನಗದು ಬಹುಮಾನ ಘೋಷಿಸಲಾಗಿದ್ದು, ಮಾಹಿತಿದಾರರ ಗುರುತು ಸಂಪೂರ್ಣ ಗೌಪ್ಯವಾಗಿರಲಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.








