Tuesday, September 22, 2026
spot_imgspot_img
spot_imgspot_img

ಹಲ್ಲೆಗೊಳಗಾದ ಮಹಿಳೆಯರ ಬೆಂಬಲಕ್ಕೆ ಶಾಸಕ ಗಂಟಿಹೊಳೆ ಭರವಸೆ-ಆರೋಪಿತ ಅಧಿಕಾರಿ ವಿರುದ್ಧ ಕಠಿಣ ಕ್ರಮಕ್ಕೆ ದಿಲೀಪ್ ಅರ್ಗೇಕರ್ ಆಗ್ರಹ

- Advertisement -
- Advertisement -

ಕಾರವಾರ: ಯಲ್ಲಾಪುರದಲ್ಲಿ ಮೀನುಗಾರ ಮಹಿಳೆ ಹಾಗೂ ತರಕಾರಿ ವ್ಯಾಪಾರಸ್ಥ ಮಹಿಳೆಯ ಮೇಲೆ ಹಲ್ಲೆ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮೀನುಗಾರ ಮುಖಂಡ ಹಾಗೂ ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ದಿಲೀಪ್ ಅರ್ಗೇಕರ್ ಅವರು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರನ್ನು ಸಂಪರ್ಕಿಸಿ ಮನವಿ ಮಾಡಿದ್ದಾರೆ.

ಮನವಿಗೆ ಸ್ಪಂದಿಸಿದ ಶಾಸಕ ಗುರುರಾಜ ಗಂಟಿಹೊಳೆ ಅವರು, ಹಲ್ಲೆಗೊಳಗಾದ ಮಹಿಳೆಯರ ಬೆಂಬಲಕ್ಕೆ ತಾನಿದ್ದು, ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ದಿಲೀಪ್ ಅರ್ಗೇಕರ್ ತಿಳಿಸಿದ್ದಾರೆ.

ರವಿವಾರ ಸಂಜೆ ಯಲ್ಲಾಪುರದಲ್ಲಿ ಬೈಂದೂರು ಪುರಸಭೆಯ ಮುಖ್ಯಾಧಿಕಾರಿ ಎಂದು ಹೇಳಲಾಗಿರುವ ಅಜಯ್ ಭಂಡಾರ್ಕರ್ ಅವರು ಮೀನುಗಾರ ಮಹಿಳೆ ಸರಸ್ವತಿ ಕುಡ್ತಾಳಕರ್ ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯನ್ನು ತಡೆಯಲು ಮುಂದಾದ ತರಕಾರಿ ವ್ಯಾಪಾರಸ್ಥೆ ಸೀತಾ ಲಮಾಣಿ ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.ಆರೋಪಿತ ಅಧಿಕಾರಿ ಬೈಂದೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಗುರುರಾಜ ಗಂಟಿಹೊಳೆ ಅವರನ್ನು ಸಂಪರ್ಕಿಸಿದ ದಿಲೀಪ್ ಅರ್ಗೇಕರ್, ಕಾನೂನಿನ ಅನ್ವಯ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಅಂಕೋಲಾ ತಾಲೂಕಿನಿಂದ ದೂರದ ಯಲ್ಲಾಪುರಕ್ಕೆ ತೆರಳಿ ದಿನನಿತ್ಯದ ದುಡಿಮೆಯ ಮೂಲಕ ಜೀವನ ನಡೆಸುತ್ತಿರುವ ಮೀನುಗಾರ ಮಹಿಳೆಯ ಮೇಲೆ ಅಧಿಕಾರಿಯ ದರ್ಪದ ವರ್ತನೆ ಖಂಡನೀಯ. ಘಟನೆಯನ್ನು ಮೀನುಗಾರ ಸಮಾಜ ತೀವ್ರವಾಗಿ ಖಂಡಿಸುತ್ತದೆ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ದಿಲೀಪ್ ಅರ್ಗೇಕರ್ ಎಚ್ಚರಿಸಿದ್ದಾರೆ.

ಅಧಿಕಾರಿಯ ದೌರ್ಜನ್ಯದ ಸಂದರ್ಭದಲ್ಲಿ ಸ್ಥಳೀಯ ನಾಗರಿಕರು ಮಹಿಳೆಯರ ಪರವಾಗಿ ನಿಂತು ಅಧಿಕಾರಿಯ ವರ್ತನೆಯನ್ನು ಖಂಡಿಸಿರುವುದು ಸ್ವಾಗತಾರ್ಹ. ನಾಗರಿಕರ ಈ ನಡೆಗೆ ಮೀನುಗಾರ ಸಮಾಜದ ಪರವಾಗಿ ಮೆಚ್ಚುಗೆ ವ್ಯಕ್ತಪಡಿಸುವುದಾಗಿ ಅವರು ತಿಳಿಸಿದ್ದಾರೆ.

- Advertisement -

Related news

error: Content is protected !!