ಮಂಗಳೂರು: ಜಾನುವಾರುಗಳನ್ನು ಹಿಂಸಾತ್ಮಕವಾಗಿ ಮತ್ತು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಕಂಕನಾಡಿ ನಗರ ಪೊಲೀಸರು ಲಾರಿಯೊಂದನ್ನು ವಶಕ್ಕೆ ಪಡೆದುಕೊಂಡು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಒಟ್ಟು 17 ಜಾನುವಾರುಗಳನ್ನು ರಕ್ಷಿಸಲಾಗಿದೆ.ಸೆ.22ರಂದು ಬೆಳಗಿನ ಜಾವ ಕಂಕನಾಡಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಸಿದ್ದರಾಮ ಅವರು ಇಲಾಖಾ ವಾಹನದಲ್ಲಿ ಮಾರ್ನಿಂಗ್ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಜಾನುವಾರುಗಳನ್ನು ಲಾರಿಯಲ್ಲಿ ಹಿಂಸಾತ್ಮಕವಾಗಿ ಕಟ್ಟಿ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿತು.
ಈ ಹಿನ್ನೆಲೆಯಲ್ಲಿ ಪೊಲೀಸರು ವಾಹನಕ್ಕಾಗಿ ಕಾಯುತ್ತಿದ್ದಾಗ, ಬೆಳಗ್ಗೆ ಸುಮಾರು 6.30ಕ್ಕೆ ಆಡ್ಯಾರು ಕಡೆಯಿಂದ ಮಂಗಳೂರು ನಗರದತ್ತ ಬರುತ್ತಿದ್ದ ಕಂದು ಬಣ್ಣದ EICHER ಲಾರಿಯೊಂದು ಪತ್ತೆಯಾಗಿದೆ.ಲಾರಿಯನ್ನು ಬೆನ್ನಟ್ಟಿ ಪಡೀಲ್ ಟೊಯೋಟಾ ಕಾರು ಶೋರೂಂ ಎದುರು ತಡೆದು ಪರಿಶೀಲಿಸಲಾಯಿತು. ಈ ವೇಳೆ ಲಾರಿ ಚಾಲಕ ಸ್ಥಳದಲ್ಲಿದ್ದರೆ, ಲಾರಿಯಲ್ಲಿದ್ದ ಮತ್ತೋರ್ವ ವ್ಯಕ್ತಿ ವಾಹನದಿಂದ ಇಳಿದು ಪರಾರಿಯಾಗಿದ್ದಾನೆ.ಬಂಧಿತ ಚಾಲಕನನ್ನು ಸಾದಿಕ್ ಜಿ. (23), ತಂದೆ ದಿವಂಗತ ಗಪೂರ್, ಹುಣಸಿನಕೆರೆ ರೋಡ್ ಸ್ಲಂ ಬೋರ್ಡ್, ವಿಶ್ವನಾಥ ನಗರ ಲೇಔಟ್, ಹಾಸನ ಜಿಲ್ಲೆ ಎಂದು ಗುರುತಿಸಲಾಗಿದೆ.ಲಾರಿಯ ಬಾಡಿಯನ್ನು ಹಸಿರು ಬಣ್ಣದ ಟಾರ್ಪಲ್‌ನಿಂದ ಮುಚ್ಚಲಾಗಿತ್ತು.
ಪರಿಶೀಲನೆ ವೇಳೆ ಒಟ್ಟು 17 ಜಾನುವಾರುಗಳು ಪತ್ತೆಯಾಗಿದ್ದು, ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಅವುಗಳನ್ನು ಒಂದರ ಮೇಲೊಂದು ಬಿಗಿಯಾಗಿ ಹಗ್ಗಗಳಿಂದ ಲಾರಿಯ ಕಬ್ಬಿಣದ ಕ್ಯಾರೇಜ್‌ಗಳಿಗೆ ಕಟ್ಟಿ, ಕತ್ತುಗಳನ್ನು ಮೇಲಕ್ಕೆ ಎತ್ತಿ ಉಸಿರಾಟಕ್ಕೂ ತೊಂದರೆಯಾಗುವ ರೀತಿಯಲ್ಲಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11(A), 11(D), ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆಯ ಸೆಕ್ಷನ್ 6 ಹಾಗೂ BNS ಸೆಕ್ಷನ್ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ 17 ಜಾನುವಾರುಗಳು, ಲಾರಿ ಹಾಗೂ ಆರೋಪಿ ಸಾದಿಕ್‌ನ ಮೊಬೈಲ್ ಫೋನ್ ಸೇರಿದಂತೆ ಸಂಬಂಧಿತ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಸಾದಿಕ್‌ನನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ.
ಪ್ರಕರಣದಲ್ಲಿ ಪರಾರಿಯಾಗಿರುವ ಆರೋಪಿಗಳಾದ ಸುಬಾನ್ ಮತ್ತು ರೆಹಮಾನ್ ಅವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.








