Thursday, September 24, 2026
spot_imgspot_img
spot_imgspot_img

ಮಂಗಳೂರು ನ್ಯಾಯಾಲಯದಿಂದ ಪೊಲೀಸರ ಕಣ್ತಪ್ಪಿಸಿ ಆರೋಪಿ ಪರಾರಿ: ಶೌಚಾಲಯಕ್ಕೆ ತೆರಳುವ ನೆಪದಲ್ಲಿ ಎಸ್ಕೇಪ್

- Advertisement -
- Advertisement -

ಮಂಗಳೂರು: ಕೊಲೆ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದಂತೆ ಪೊಲೀಸ್ ವಶದಲ್ಲಿದ್ದ ಆರೋಪಿಯೊಬ್ಬ ಪೊಲೀಸರ ಕಣ್ತಪ್ಪಿಸಿ ಪರಾರಿಯಾದ ಘಟನೆ ಸೆ.22ರಂದು ಮಂಗಳೂರು ನ್ಯಾಯಾಲಯ ಸಂಕೀರ್ಣದಲ್ಲಿ ನಡೆದಿದೆ.ಮೂಡಬಿದ್ರೆ ಪೊಲೀಸ್ ಠಾಣೆಯ ಕ್ರೈಂ ನಂಬರ್ 292/2018, ಕಲಂ 302 ಐಪಿಸಿ ಅಡಿಯಲ್ಲಿ ದಾಖಲಾಗಿರುವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸೆ.22ರಂದು ವಿಚಾರಣೆ ನಿಗದಿಯಾಗಿತ್ತು. ಪ್ರಕರಣದ ಐವರು ಆರೋಪಿಗಳ ಪೈಕಿ ಸಂದೀಪ್ ಶೆಟ್ಟಿ, ಪ್ರಸಾದ್, ಬಾಲರಾಜ್ ಹಾಗೂ ಪ್ರಭಾಕರ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.ಈ ಹಿಂದೆ ವಿಚಾರಣೆಗೆ ಗೈರಾಗಿದ್ದ ಹಿನ್ನೆಲೆಯಲ್ಲಿ ಪ್ರಸಾದ್ ವಿರುದ್ಧ ನ್ಯಾಯಾಲಯ ವಾರೆಂಟ್ ಹೊರಡಿಸಿತ್ತು.

ವಿಚಾರಣೆ ವೇಳೆ ಆತನ ಪರ ಯಾವುದೇ ವಕೀಲರು ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯವು ಪ್ರಸಾದ್‌ನನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತು.ನ್ಯಾಯಾಲಯದ ಆದೇಶದ ಬಳಿಕ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪಿಸಿ 866 ವಿನಾಯಕ ಸಂಶಿ ಅವರ ವಶಕ್ಕೆ ಆರೋಪಿಯನ್ನು ಒಪ್ಪಿಸಲಾಗಿತ್ತು. ಬಳಿಕ ಮೂಡಬಿದ್ರೆ ಪೊಲೀಸ್ ಠಾಣೆಯ ಪಿಸಿ 3233 ಅಶೋಕ್ ಎಸ್.ಟಿ. ಅವರು ಆರೋಪಿಯನ್ನು ವಶಕ್ಕೆ ಪಡೆದು ರಿಮಾಂಡ್ ವಾರೆಂಟ್ ಸ್ವೀಕರಿಸಿದ್ದರು.

ಈ ನಡುವೆ ಆರೋಪಿ ತನ್ನ ಬಳಿಯಿದ್ದ ಪ್ರಕರಣದ ಕಡತದೊಂದಿಗೆ ನ್ಯಾಯಾಲಯದಲ್ಲಿದ್ದ ಇತರ ವಕೀಲರನ್ನು ಸಂಪರ್ಕಿಸಿ ಜಾಮೀನಿಗೆ ಮನವಿ ಮಾಡಿದ್ದ ಎನ್ನಲಾಗಿದೆ. ಆದರೆ ಯಾರೂ ಜಾಮೀನು ನೀಡಲು ಮುಂದಾಗಿರಲಿಲ್ಲ ಎಂದು ತಿಳಿದುಬಂದಿದೆ.ಬಳಿಕ ರಿಮಾಂಡ್ ವಾರೆಂಟ್‌ನೊಂದಿಗೆ ಆರೋಪಿಯನ್ನು ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುತ್ತಿದ್ದ ವೇಳೆ, ಮಧ್ಯಾಹ್ನ ಸುಮಾರು 3.30ರ ವೇಳೆಗೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಬಳಿಯ ಶೌಚಾಲಯಕ್ಕೆ ತೆರಳುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಶೌಚಾಲಯಕ್ಕೆ ತೆರಳಿದ ಬಳಿಕ ಪೊಲೀಸರ ಕಣ್ತಪ್ಪಿಸಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಘಟನೆ ಸಂಬಂಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಯ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

- Advertisement -

Related news

error: Content is protected !!