ಮಂಗಳೂರು: ಪಾಂಡೇಶ್ವರದ ಎಮ್ಮೆಕೆರೆ ಬಳಿಯ “ರಮಾ ಲಕ್ಷ್ಮೀ ನಾರಾಯಣ ಹಾಲ್” ನಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ ಮೊದಲ ಮಹಡಿಯ ಪ್ಯಾಸೇಜ್ ಏಕಾಏಕಿ ಕುಸಿದು ಬಿದ್ದು 16 ವರ್ಷದ ಪಿಯು ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಸೇಂಟ್ ಅಲೋಶಿಯಸ್ ಪಿಯು ಕಾಲೇಜಿನ ಕಾಮರ್ಸ್ ವಿದ್ಯಾರ್ಥಿ ಮೊಹಿದೀನ್ ಶಮ್ಮಾಸ್ (16) ಎಂದು ಗುರುತಿಸಲಾಗಿದೆ. ಈ ಸಂಬಂಧ ಮೃತನ ತಂದೆ ಮೊಹಮ್ಮದ್ ಇಲಿಯಾಸ್ ಮೊಹಿದಿನಬ್ಬ ಅವರು ನೀಡಿದ ದೂರಿನ ಮೇರೆಗೆ ಮಂಗಳೂರು ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೃತರ ತಂದೆ ನೀಡಿದ ದೂರಿನಂತೆ, ಸೆ.26 ರಂದು ಮಧ್ಯಾಹ್ನ ಪಾಂಡೇಶ್ವರದ ರಮಾ ಲಕ್ಷ್ಮೀ ನಾರಾಯಣ ಹಾಲ್ ನಲ್ಲಿ ವಕೀಲ ದಿನಕರ ಶೆಟ್ಟಿ ಎಂಬವರು ಆಯೋಜಿಸಿದ್ದ ಆಲ್ ಕಾಲೇಜ್ ಸ್ಟೂಡೆಂಟ್ ಅಸೋಸಿಯೇಷನ್ ನ ಪದಗ್ರಹಣ ಕಾರ್ಯಕ್ರಮ ನಡೆದಿತ್ತು.
ಮಧ್ಯಾಹ್ನ ಸುಮಾರು 2 ಗಂಟೆಗೆ ಕಟ್ಟಡದ ಹೊರಗೆ ವಿಧ್ಯಾರ್ಥಿಗಳೆಲ್ಲರೂ ಸೇರಿಕೊಂಡು ಕಟ್ಟಡದ ಹೊರಗಿನ ರಸ್ತೆಯಿಂದ ಕಾರ್ಯಕ್ರಮ ನಡೆಯುವ “ರಮಾ ಲಕ್ಷ್ಮೀ ನಾರಾಯಣ ಹಾಲ್” ನ ಕಟ್ಟಡದ ಒಳಗೆ ಹೋಗಲು ರ್ಯಾಲಿಯಲ್ಲಿ ರಸ್ತೆಯಲ್ಲಿ ಹೋಗುವಾಗ ಕಟ್ಟಡದ ಮೊದಲ ಮಹಡಿಯ ಪ್ಯಾಸೇಜಲ್ಲಿ ಹಲವು ವಿಧ್ಯಾರ್ಥಿಗಳು ಗುಂಪುಗೂಡಿಕೊಂಡು ರ್ಯಾಲಿಯನ್ನು ವೀಕ್ಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಕಟ್ಟಡದ ಕೆಳಗೆ ಮೊಹಿದೀನ್ ಶಮ್ಮಾಸ್ ಕೂಡ ನಿಂತು ಕೊಂಡು ರ್ಯಾಲಿಯನ್ನು ವೀಕ್ಷಿಸುತ್ತಿದ್ದರು.
ಈ ವೇಳೆ ಸುಮಾರು 2:50ಕ್ಕೆ ಪ್ಯಾಸೇಜ್ ನ ತಡೆಗೋಡೆ ಏಕಾಏಕಿ ಕುಸಿದು ಶಮ್ಮಾಸ್ ನ ತಲೆಯ ಮೇಲೆ ಬಿದ್ದ ಪರಿಣಾಮ ತಲೆಯ ಭಾಗ, ಎರಡೂ ಕಾಲು, ಭುಜಕ್ಕೆ ಗಂಭೀರ ಗಾಯವಾಗಿ ರಕ್ತಸ್ರಾವವಾಗಿದೆ. ಜೊತೆಗೆ ಮೊಹಮ್ಮದ್ ಸನಾನ್ ಅಹ್ಮದ್, ಮೊಹಮ್ಮದ್ ಹನೀಫ್ ಹಾಗೂ ದಾವೂದ್ ಎಂಬ ವಿದ್ಯಾರ್ಥಿಗಳಿಗೂ ಗಾಯವಾಗಿದೆ. ಗಾಯಾಳುಗಳನ್ನು ಅಲ್ಲಿದ್ದ ವಿದ್ಯಾರ್ಥಿಗಳು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ್ದು, ವೈದ್ಯರು ಶಮ್ಮಾಸ್ ನನ್ನು ಐಸಿಯುನಲ್ಲಿ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11:33ಕ್ಕೆ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಕುಸಿಯಬಹುದು ಎಂದು ಕಟ್ಟಡದ ಮಾಲೀಕ ಪರೀಕ್ಷಿತ್ ಆರ್ ಎಂಬುವವರು ಮೊದಲೇ ತಿಳಿಸಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸೇರಿಸಿ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಟ್ಟಿದ್ದು ಹಾಗೂ ಆಯೋಜಕರಾದ ದಿನಕರ ಶೆಟ್ಟಿ ಅವರು ಯಾವುದೇ ಮುಂಜಾಗರೂಕತಾ ಕ್ರಮ ಕೈಗೊಳ್ಳದೆ ತೀವ್ರ ನಿರ್ಲಕ್ಷ್ಯ ಮಾಡಿ ಕಾರ್ಯಕ್ರಮ ಆಯೋಜಿಸಿದ್ದೇ ಈ ದುರಂತಕ್ಕೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಆಯೋಜಕರು ಮತ್ತು ಕಟ್ಟಡ ಮಾಲೀಕನ ವಿರುದ್ಧ BNS ಸೆಕ್ಷನ್ 106(1), 125(a), 125(b), 290 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.








