


ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ರಿ.) ಕರ್ನಾಟಕದ ಶ್ರೀ ಗಣೇಶ ಸಭಾಭವನ , ನೇರಳಕಟ್ಟೆ ಶಾಖೆಯವತಿಯಿಂದ ಕಳೆದ 62 ದಿನಗಳಿಂದ ನಡೆಯುತ್ತಿರುವ ಯೋಗ ತರಗತಿಯ ಅಂಗವಾಗಿ ಸೆ. 27ರಂದು ಮಾತೃ ವಂದನಾ, ಮಾತೃ ಧ್ಯಾನ,ಹಾಗೂ ಮಾತೃಭೋಜನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಕಸ್ತೂರಿ ಅಕ್ಕ, ಶಿಕ್ಷಕರು ಶ್ರೀ ದುರ್ಗಾಪರಮೇಶ್ವರಿ ಶಾಖೆ ಕರಿಂಕ ವಹಿಸಿದ್ದರು. ಮುಖ್ಯ ಮಾತುಗಾರರಾಗಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕದ ಜಿಲ್ಲಾ ಮಕ್ಕಳ ಶಿಕ್ಷಣ ಪ್ರಮುಖರಾದ ಶ್ರೀಮತಿ ಶ್ರೀಕಲಾ ಅಕ್ಕ ಭಾಗವಹಿಸಿದ್ದರು. ಮುಖ್ಯ ಅತಿಥಿಯಾಗಿ ಶ್ರೀಮತಿ ಕಸ್ತೂರಿ ಅಕ್ಕ, ನಿವೃತ್ತ ಹಿರಿಯ ಆರೋಗ್ಯ ಸಹಾಯಕಿ ಉಪಸ್ಥಿತರಿದ್ದರು.

ಮುಖ್ಯ ಮಾತುಗಾರರಾದ ಶ್ರೀಮತಿ ಶ್ರೀಕಲಾ ಅಕ್ಕ ಅವರು ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ತಾಯಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಾಯಿ ನೀಡುವ ಪ್ರೀತಿ, ತ್ಯಾಗ, ಸಂಸ್ಕಾರ ಹಾಗೂ ಮಮತೆಯನ್ನು ಜೀವನದುದ್ದಕ್ಕೂ ಸ್ಮರಿಸಬೇಕು. ಹೆತ್ತವರನ್ನು ಹಾಗೂ ಹಿರಿಯರನ್ನು ಸದಾ ಗೌರವದಿಂದ ಕಾಣುವುದು ನಮ್ಮ ಕರ್ತವ್ಯವಾಗಿದ್ದು, ಮಾತೃ–ಪಿತೃ ಭಕ್ತಿಯೊಂದಿಗೆ ಉತ್ತಮ ಸಂಸ್ಕಾರಯುತ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರು, ಯೋಗ ತರಬೇತಿ ಪಡೆಯುತ್ತಿರುವ ಯೋಗಪಟುಗಳು ಹಾಗೂ ಸಾರ್ವಜನಿಕರು ಸೇರಿದಂತೆ ಒಟ್ಟು 500 ಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸಿದ್ದರು.

ವಿಶೇಷವಾಗಿ ಯೋಗಪಟುಗಳೇ ತಮ್ಮ ಮನೆಗಳಿಂದ ವಿವಿಧ ರೀತಿಯ ಸಾತ್ವಿಕ ಆಹಾರವನ್ನು ಸಿದ್ಧಪಡಿಸಿ ತಂದು, ಪರಸ್ಪರ ಪ್ರೀತಿಯಿಂದ ಹಂಚಿಕೊಂಡು ಮಾತೃಭೋಜನವನ್ನು ವಿಶಿಷ್ಟವಾಗಿ ಆಚರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕೈತುತ್ತಿನ ಮೂಲಕ ಆಹಾರವನ್ನು ಪರಸ್ಪರ ವಿತರಿಸುವ ಮೂಲಕ ಮಾತೃಭೋಜನ ಕಾರ್ಯಕ್ರಮವು ಆತ್ಮೀಯವಾಗಿ ಸಂಪನ್ನಗೊಂಡಿತು.
ಕಾರ್ಯಕ್ರಮವನ್ನು ಶ್ರೀಮತಿ ಲಿಖಿತಾ ಅಕ್ಕ ನಿರೂಪಿಸಿದರು. ಶ್ರೀಮತಿ ಶಶಿಕಲಾ ಅಕ್ಕ ಸ್ವಾಗತಿಸಿದರು. ಶ್ರೀಮತಿ ಕವಿತಾ ಅಕ್ಕ ಕಾರ್ಯಕ್ರಮದ ವರದಿ ವಾಚನ ಮಾಡಿದರು. ಶ್ರೀಮತಿ ಜ್ಯೋತಿ ಅಕ್ಕ ವಂದನಾರ್ಪಣೆ ಸಲ್ಲಿಸಿದರು.
ಮಾತೃವಂದನೆ, ಮಾತೃಭೋಜನದಂತಹ ಕಾರ್ಯಕ್ರಮಗಳ ಮೂಲಕ ತಾಯಿಯ ಮಹತ್ವವನ್ನು ಅರಿಯುವುದರ ಜೊತೆಗೆ ಕುಟುಂಬದ ಹಿರಿಯರನ್ನು ಗೌರವಿಸುವ ಸಂಸ್ಕಾರ, ಪರಸ್ಪರ ಪ್ರೀತಿ, ಆತ್ಮೀಯತೆ ಹಾಗೂ ಸಾಮಾಜಿಕ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಂದೇಶವನ್ನು ಕಾರ್ಯಕ್ರಮ ಸಾರಿತು.








