Thursday, October 1, 2026
spot_imgspot_img
spot_imgspot_img

ಮಾಣಿಯಲ್ಲಿ ಅ.4ರಂದು ದಸರಾ ಕ್ರೀಡಾಕೂಟ: ಕಬ್ಬಡಿ, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸ್ಪರ್ಧೆಗಳು

- Advertisement -
- Advertisement -


ಮಾಣಿ: ಶ್ರೀ ಶಾರದಾ ಯುವ ವೇದಿಕೆ ಸೇವಾ ಟ್ರಸ್ಟ್ (ರಿ.), ಮಾಣಿ ಇದರ ವತಿಯಿಂದ ನವರಾತ್ರಿ ಮಹೋತ್ಸವದ ಅಂಗವಾಗಿ ಅಕ್ಟೋಬರ್ 4ರಂದು ಭಾನುವಾರ ಮಾಣಿ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ದಸರಾ ಕ್ರೀಡಾಕೂಟ ಆಯೋಜಿಸಲಾಗಿದೆ.


ಬೆಳಗ್ಗೆ 9 ಗಂಟೆಗೆ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದ್ದು, ಶ್ರೀ ಉಳ್ಳಾಲ್ತಿ ದೈವಸ್ಥಾನ ಮಾಣಿಯ ಆಡಳಿತ ಮೊಕ್ತಸರರಾದ ಶ್ರೀ ಸಚಿನ್ ರೈ ಮಾಣಿಗುತ್ತು ಉದ್ಘಾಟಿಸಲಿದ್ದಾರೆ. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಗಂಗಾಧರ ರೈ ತುಂಗೆರೆಕೋಡಿ ಗೌರವ ಉಪಸ್ಥಿತರಿರುವರು.


ಕ್ರೀಡಾಕೂಟದಲ್ಲಿ ಹಿರಿಯರ ಕಬ್ಬಡಿ ಪಂದ್ಯಾಟ, 9ನೇ ತರಗತಿಯಿಂದ ಪದವಿವರೆಗಿನ ಕಬ್ಬಡಿ ಪಂದ್ಯಾಟ ಹಾಗೂ 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳ ಕಬ್ಬಡಿ ಪಂದ್ಯಾಟ ನಡೆಯಲಿದೆ. ಹಿರಿಯರ ಕಬ್ಬಡಿ ಪಂದ್ಯಾಟದಲ್ಲಿ ಪ್ರಥಮ ಬಹುಮಾನ ರೂ.4,001 ಹಾಗೂ ದ್ವಿತೀಯ ಬಹುಮಾನ ರೂ.3,001 ನಗದು ನೀಡಲಾಗುವುದು. 9ನೇ ತರಗತಿಯಿಂದ ಪದವಿವರೆಗಿನ ವಿಭಾಗದಲ್ಲಿ ಪ್ರಥಮ ರೂ.1,501 ಹಾಗೂ ದ್ವಿತೀಯ ರೂ.1,001 ಮತ್ತು 1ರಿಂದ 8ನೇ ತರಗತಿ ವಿಭಾಗದಲ್ಲಿ ಪ್ರಥಮ ರೂ.701 ಹಾಗೂ ದ್ವಿತೀಯ ರೂ.301 ನಗದು ಬಹುಮಾನ ನೀಡಲಾಗುವುದು.


ಉತ್ತಮ ರೈಡರ್, ಉತ್ತಮ ಕ್ಯಾಚರ್ ಹಾಗೂ ಸವ್ಯಸಾಚಿ ಆಟಗಾರರಿಗೆ ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು.
ಮಧ್ಯಾಹ್ನ 2 ಗಂಟೆಗೆ ಮಹಿಳೆಯರಿಗಾಗಿ ಹಗ್ಗಜಗ್ಗಾಟ, ಸಂಗೀತ ಕುರ್ಚಿ, ಬಾಲ್ ತ್ರೋ ಹಾಗೂ ಕ್ಯಾಂಡಲ್ ಉರಿಸುವ ಸ್ಪರ್ಧೆಗಳು ನಡೆಯಲಿವೆ.


ಸಂಜೆ 4 ಗಂಟೆಗೆ ಸಾರ್ವಜನಿಕ 7 ಜನರ ಪುರುಷರ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದ್ದು, ಪ್ರಥಮ ಬಹುಮಾನ ರೂ.2,501 ಹಾಗೂ ದ್ವಿತೀಯ ರೂ.2,001 ನಗದು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವವರು ತಾವೇ 7 ಜನರ ತಂಡ ರಚಿಸಿ ತರಬೇಕು. ಸಂಜೆ 4 ಗಂಟೆಗೆ ಸ್ಪರ್ಧೆ ಆರಂಭವಾಗಲಿದ್ದು, ಸಂಘಟಕರು ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಸಂಜೆ 5 ಗಂಟೆಗೆ ದಸರಾ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ರಾಜೇಶ್ ನ್ಯಾಕ್ ಉಳಿಪಾಡಿಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ.

ಮಾಜಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್, ಅಗ್ರಜ ಬಿಲ್ಡರ್ಸ್ ಮಂಗಳೂರುನ ಶ್ರೀ ಸಂದೇಶ್ ಶೆಟ್ಟಿ ಅರೆಬೆಟ್ಟು, ನ್ಯಾಯ ಜಾಗರಣ ಸಂಯೋಜಕ ಹಾಗೂ ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆ ಸಂಯೋಜಕರಾದ ಶ್ರೀ ರಾಜೇಶ್ ಬೊಳ್ಳುಕಲ್ಲು, ಹಿಂದೂ ಮುಖಂಡ ಶ್ರೀ ಶೈಲೇಶ್ ಬಜಿಲಕೇರಿ ಸೇರಿದಂತೆ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಸಮಾರಂಭದಲ್ಲಿ ಹಿರಿಯ ಕಾರ್ಯಕರ್ತ ಹಾಗೂ ಶ್ರೀ ಶಾರದಾ ಯುವ ವೇದಿಕೆಯ ಸ್ಥಾಪಕರಾದ ಶ್ರೀ ಸುಬ್ರಾಯ ನಾಯಕ್, ಮಹಿಳಾ ಕರಸೇವಕಿ ಶ್ರೀಮತಿ ಸುಭಾಷಿಣಿ ಶೆಟ್ಟಿ ಸೂರಿಕುಮೇರು ಹಾಗೂ ಮಾಣಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಿವೃತ್ತ ಸಿಬ್ಬಂದಿ ಶ್ರೀ ಮುತ್ತಪ್ಪ ಪೂಜಾರಿ ಕಡ್ಡಡ್ಕ ಮಾಣಿ ಅವರನ್ನು ಗೌರವಿಸಲಾಗುವುದು.


ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ಶಾರದಾ ಯುವ ವೇದಿಕೆ ಸೇವಾ ಟ್ರಸ್ಟ್‌ನ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಸರ್ವಸದಸ್ಯರು ಮನವಿ ಮಾಡಿದ್ದಾರೆ.

- Advertisement -

Related news

error: Content is protected !!