


ಮಂಗಳೂರು: ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ನೇಮಕಾತಿ-2026ರ ಸಹಿಷ್ಣುತೆ ಮತ್ತು ದೇಹದಾಡ್ಯತೆ ಪರೀಕ್ಷೆಯ ಸಂದರ್ಭದಲ್ಲಿ ನಕಲಿ ಕರೆಪತ್ರ (ಹಾಲ್ ಟಿಕೆಟ್) ಹಾಗೂ ದಾಖಲೆಗಳನ್ನು ಸೃಷ್ಟಿಸಿ ವಂಚಿಸಲು ಯತ್ನಿಸಿದ ಆರೋಪದ ಮೇಲೆ ಯಜೇಶ್ ಬಿ.ಜೆ. ರೈ ಎಂಬುವವರನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾರುಪಡಿಸಲಾಗಿದೆ.
ಸೆ. 28ರಂದು ಮಂಗಳೂರು ನಗರದ ಮಂಗಳಾ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ನೇಮಕಾತಿ-2026ರ ಸಹಿಷ್ಣುತೆ ಮತ್ತು ದೇಹದಾಡ್ಯತೆ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ವೇಳೆ ಅರ್ಹ ಅಭ್ಯರ್ಥಿಗಳ ನೋಂದಣಿ ಪ್ರಕ್ರಿಯೆಯಲ್ಲಿ ಸಿ.ಪಿ.ಸಿ.-5225446 ಸಂಖ್ಯೆಯ ಆನ್ಲೈನ್ ಹಾಲ್ ಟಿಕೆಟ್ನೊಂದಿಗೆ ಕಡಬ ತಾಲೂಕಿನ ಬೆದ್ರಾಜೆ ಮನೆಯ ಯಜೇಶ್ ಬಿ.ಜೆ. ರೈ (22 ವರ್ಷ) ಎಂಬ ಅಭ್ಯರ್ಥಿ ಪರೀಕ್ಷಾ ಕರೆಪತ್ರವನ್ನು ಹಾಜರುಪಡಿಸಿದ್ದರು.
ನೋಂದಣಿ ಡೆಸ್ಟ್ನಲ್ಲಿ ಕರ್ತವ್ಯದಲ್ಲಿದ್ದ ಸಿಪಿಸಿ-446 ಮಹಾದೇವ್ ಮತ್ತು ಎಚ್ಸಿ-46 ಪೂರ್ಣೇಶ್ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒದಗಿಸಿದ ತಂತ್ರಾಂಶದಲ್ಲಿ ಪರಿಶೀಲಿಸಿದಾಗ, ಸದರಿ ಅಭ್ಯರ್ಥಿಯ ವಿವರಗಳು ಪಟ್ಟಿಯಲ್ಲಿ ಕಂಡುಬಂದಿಲ್ಲ. ಅಲ್ಲದೆ, ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಯ 1:5 ಅರ್ಹತಾ ಪಟ್ಟಿಯಲ್ಲಿಯೂ ಅಭ್ಯರ್ಥಿಯ ಹೆಸರು ಅಥವಾ ಅರ್ಜಿ ಸಂಖ್ಯೆ ಲಭ್ಯವಿರಲಿಲ್ಲ. ಪರಿಣಾಮವಾಗಿ, ಅವರಿಗೆ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಲಾಯಿತು. ಅಭ್ಯರ್ಥಿ ಹಾಜರುಪಡಿಸಿದ ದಾಖಲೆಗಳು ಮೇಲ್ನೋಟಕ್ಕೆ ನಕಲಿ ಎಂಬುದು ದೃಢಪಟ್ಟಿತ್ತು.
ಈ ನಕಲಿ ಹಾಲ್ ಟಿಕೆಟ್ ಪ್ರಿಂಟ್ ಪಡೆದುಕೊಂಡಿದ್ದ ಮೂಲವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಬರ್ಕೆ ಪೊಲೀಸ್ ಠಾಣೆಯ ತನಿಖಾ ತಂಡವು ಕಡಬಕ್ಕೆ ಆಗಮಿಸಿ, ಸ್ಥಳೀಯ ಜೆರಾಕ್ಸ್/ಸೈಬರ್ ಅಂಗಡಿಯೊಂದಕ್ಕೆ ಭೇಟಿ ನೀಡಿ ಮಹತ್ವದ ಮಹಜರು ಹಾಗೂ ಪರಿಶೀಲನೆ ನಡೆಸಿದೆ. ಪ್ರಸ್ತುತ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾರುಪಡಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಪ್ರಕಾಶ್ ರುದ್ರಪ್ಪ ಹೂವಿನ ಅವರು ನೀಡಿದ ದೂರಿನ ಮೇರೆಗೆ, ಬರ್ಕೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 336(1), 336(3), 318(4) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.








