

ಕಾಸರಗೋಡು : ಸೀತಾಂಗೋಳಿ- ಪೆರ್ಲ ರಸ್ತೆಯ ಪುತ್ತಿಗೆ ಮುಗುರೋಡ್ ಎಂಬಲ್ಲಿ ಗುರುವಾರ(ಅ.01) ಮಧ್ಯಾಹ್ನ ಕಾರು-ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರರೋರ್ವರು ಮೃತಪಟ್ಟ ಘಟನೆ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಮುಗು ನಿವಾಸಿ ಎಂ.ಟಿ. ಮುಹಮ್ಮದ್ ಅಶ್ರಫ್(40) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೃತರ ಪತ್ನಿ ಖೈರುನ್ನೀಸಾ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಖೈರುನ್ನೀಸಾ ಅವರ ಆರೋಗ್ಯ ತಪಾಸಣೆಗಾಗಿ ವೈದ್ಯರನ್ನು ಭೇಟಿಯಾಗಲು ದಂಪತಿಗಳು ಬೈಕ್‌ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಮುಗುರೋಡ್‌ನಲ್ಲಿ ವಿರುದ್ಧ ದಿಕ್ಕಿನಿಂದ ಅತಿ ವೇಗವಾಗಿ ಬಂದ ಕಾರು ಇವರ ಬೈಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ದಂಪತಿಗಳಿಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದು, ಭಾರಿ ಪೆಟ್ಟು ಬಿದ್ದ ಪರಿಣಾಮ ಅಶ್ರಫ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತಕ್ಷಣವೇ ಧಾವಿಸಿದ ಸ್ಥಳೀಯರು ತೀವ ರಕ್ತಸ್ರಾವದಿಂದ ಬಳಲುತ್ತಿದ್ದ ಖೈರುನ್ನೀಸಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.








