

ಮಂಗಳೂರು: ನಗರದಲ್ಲಿ ನಡೆದಿದ್ದ ಸರಣಿ ಮನೆಗಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ದಾಖಲಾದ 24 ಗಂಟೆಯೊಳಗೆ ಗುಜರಾತ್ನ ವಡೋದರಾದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು 18 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅಳಕೆ ಕಂಬ್ಲ ಕ್ರಾಸ್ ರಸ್ತೆಯಲ್ಲಿರುವ ಸಹಯೋಗ ರೆಸಿಡೆನ್ಸಿ ಕಾಂಪ್ಲೆಕ್ಸ್ನ ಮನೆಯೊಂದರಲ್ಲಿ ಸೆ.28 ರಂದು ಮಧ್ಯಾಹ್ನ 3 ಗಂಟೆಗೆ ಬೀಗ ಹಾಕಿ ಮನೆಯವರು ಮಾರುಕಟ್ಟೆಗೆ ತೆರಳಿದ್ದರು. ಸಂಜೆ 5:10ಕ್ಕೆ ವಾಪಸ್ ಬಂದು ನೋಡಿದಾಗ ಬಾಗಿಲಿನ ಕೊಂಡಿ ಮುರಿದು, ಸುಮಾರು 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು, ವಾಚ್ ಮತ್ತು ಟ್ರಾಲಿ ಬ್ಯಾಗ್ ಕಳವಾಗಿತ್ತು. ಈ ಬಗ್ಗೆ ಮಂಗಳೂರು ಉತ್ತರ ಠಾಣೆಯಲ್ಲಿ ಅ.ಕ್ರ. 121/2026 ಕಲಂ 331(3), 305 BNS ಅಡಿ ಪ್ರಕರಣ ದಾಖಲಾಗಿತ್ತು.
ಅದೇ ರೀತಿ ಸೆ.27 ರಂದು ಬರ್ಕೆ ಠಾಣಾ ವ್ಯಾಪ್ತಿಯ ಬೊಕ್ಕಪಟ್ಟಣ ರಸ್ತೆಯ ಮನೆಯೊಂದರಲ್ಲಿಯೂ ಲಾಕರ್ ಹೊಡೆದು ಕಳ್ಳತನಕ್ಕೆ ಯತ್ನ ನಡೆದಿದ್ದು, ಬೆಲೆಬಾಳುವ ವಸ್ತು ಸಿಗದ ಕಾರಣ ಚೆಕ್ ಪುಸ್ತಕಗಳನ್ನು ಕದ್ದೊಯ್ದಿದ್ದರು. ಬರ್ಕೆ ಠಾಣೆ ಅ.ಕ್ರ. 86/2026 ರಲ್ಲಿ ಪ್ರಕರಣ ದಾಖಲಾಗಿತ್ತು.
ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ತನಿಖೆ ನಡೆಸಿದಾಗ, ಆರೋಪಿಗಳು ಕಳ್ಳತನದ ಬಳಿಕ ರೈಲಿನಲ್ಲಿ ದೆಹಲಿ ಕಡೆಗೆ ಪರಾರಿಯಾಗುತ್ತಿರುವುದು ಪತ್ತೆಯಾಗಿದೆ. ಕೂಡಲೇ ಗುಜರಾತ್ನ ವಡೋದರಾ ಪೊಲೀಸರ ನೆರವು ಪಡೆದ ಮಂಗಳೂರು ಪೊಲೀಸರು, ಸೆ.29 ರಂದು ವಡೋದರಾದಲ್ಲಿ ಇಬ್ಬರನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತರನ್ನು ಅರ್ಮಾನ್ ಖಾನ್ @ ಅಮನ್ ಸೋನಿ(34), ಗೋಕುಲ್ ಪುರಿ, ಸಂಜೀವ್ ಕುಮಾರ್ @ ಜಾನಿ(34), ಸುಲ್ತಾನ್ ಪುರಿ, ನವದೆಹಲಿ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಕಳವು ಮಾಡಲಾಗಿದ್ದ ಎಲ್ಲಾ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ಸುಮಾರು ₹18 ಲಕ್ಷ ಎಂದು ಅಂದಾಜಿಸಲಾಗಿದೆ. ಬಂಧಿತರನ್ನು ಮಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಧಿತ ಅರ್ಮಾನ್ ಖಾನ್ ವಿರುದ್ಧ ದೆಹಲಿ, ಮುಂಬೈ, ಬೆಂಗಳೂರು, ಗೋವಾ, ಹೈದರಾಬಾದ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ 40ಕ್ಕೂ ಅಧಿಕ ಮನೆಗಳ್ಳತನ ಪ್ರಕರಣಗಳು ದಾಖಲಾಗಿದ್ದು, ವಾರಂಟ್ ಮತ್ತು ಪ್ರೊಕ್ಲಮೇಶನ್ ಬಾಕಿ ಇದೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.








