

ಬೆಂಗಳೂರು: ನಾಯಂಡಹಳ್ಳಿಯ ವಿನಾಯಕ ಲೇಔಟ್ನಲ್ಲಿ ನಡೆದ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಹಾಗೂ ಮಗು ಮೃತಪಟ್ಟಿದ್ದಾರೆ.
ರಾಯಚೂರು ಮೂಲದ ಕರಿಲಿಂಗಪ್ಪ ಅವರ ಕುಟುಂಬ ವಿನಾಯಕ ಲೇಔಟ್ನಲ್ಲಿ ಕಳೆದ 25 ವರ್ಷಗಳಿಂದ ವಾಸವಾಗಿತ್ತು. ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದ ಈ ಕುಟುಂಬ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು
ನಿನ್ನೆ ಬೆಳಗ್ಗೆ ಸುಮಾರು 6:20ರ ವೇಳೆಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿತ್ತು. ಬಾಗಿಲು ತೆಗೆದು ಅಡುಗೆ ಮಾಡಲು ಸ್ಟೌವ್ ಹಚ್ಚಿದ ಕೂಡಲೇ ಸಿಲಿಂಡರ್ ಸ್ಫೋಟಗೊಂಡಿದೆ. ಕಳೆದ ಮೂರು ದಿನಗಳಿಂದ ಸಿಲಿಂಡರ್ನಲ್ಲಿ ಲೀಕೇಜ್ ಸಮಸ್ಯೆ ಇತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.
ಸ್ಫೋಟದ ಪರಿಣಾಮ ಕರಿಲಿಂಗಪ್ಪ, ಅವರ ಪತ್ನಿ ಲಕ್ಷ್ಮಮ್ಮ ಹಾಗೂ ನಾಲ್ವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು. ಎಲ್ಲರನ್ನೂ ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ವಾರ್ಡ್ನಲ್ಲಿ ಚಿಕಿತ್ಸೆ ಮುಂದುವರಿದಿತ್ತು.
ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮಮ್ಮ ಹಾಗೂ ಅವರ ಮೂರು ವರ್ಷದ ಅವಳಿ ಮಕ್ಕಳಲ್ಲಿ ಒಂದು ಮಗು ಮೃತಪಟ್ಟಿದೆ.
ಲಕ್ಷ್ಮಮ್ಮ ಅವರಿಗೆ ಸುಮಾರು ಶೇ.70ರಷ್ಟು ಸುಟ್ಟ ಗಾಯಗಳಾಗಿದ್ದರೆ, ಕರಿಲಿಂಗಪ್ಪ ಅವರಿಗೆ ಶೇ.45ರಷ್ಟು ಸುಟ್ಟ ಗಾಯಗಳಾಗಿವೆ. 11 ವರ್ಷದ ಚೈತ್ರಾ, 9 ವರ್ಷದ ಬಸವ ಹಾಗೂ ಮತ್ತೊಂದು ಮೂರು ವರ್ಷದ ಮಗು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ.








