Wednesday, October 7, 2026
spot_imgspot_img
spot_imgspot_img

4 ವರ್ಷಗಳ ಬಳಿಕ ರೆಪೋ ದರ ಏರಿಕೆ – ದುಬಾರಿಯಾಗಲಿದೆ ಇಎಂಐ

- Advertisement -
- Advertisement -

ನವದೆಹಲಿ : ನಿರೀಕ್ಷೆಯಂತೆ ನಾಲ್ಕು ವರ್ಷಗಳ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ರೆಪೋ ದರ ಹೆಚ್ಚಿಸಿದೆ. ಪ್ರಸಕ್ತ ಹಣಕಾಸು ವರ್ಷವಾದ 2026-27ರಲ್ಲಿ ಜಿಡಿಪಿ ಶೇ. 7.1ರಷ್ಟು ಹೆಚ್ಚಬಹುದು ಎಂದು ಎಂಪಿಸಿ ಸಭೆಯಲ್ಲಿ ಅಂದಾಜಿಸಲಾಗಿದೆ.

ದೇಶದಲ್ಲಿ ಹಣದುಬ್ಬರ ಏರಿಕೆಯ ಭೀತಿ ಹಿನ್ನೆಲೆಯಲ್ಲಿ ಆರ್‌ಬಿಐ ಹಣಕಾಸು ನೀತಿ ಸಮಿತಿ(ಎಂಪಿಸಿ) 25 ಬೇಸಿಸ್ ಪಾಯಿಂಟ್(ಶೇ. 0.25) ಏರಿಕೆ ಮಾಡಿದೆ. ಇದರಿಂದಾಗಿ ರೆಪೋ ದರವು ಶೇ. 5.50ಕ್ಕೆ ಏರಿಕೆಯಾಗಿದ್ದು, ಗೃಹ, ವಾಹನ ಸೇರಿದಂತೆ ವಿವಿಧ ಬ್ಯಾಂಕ್ ಸಾಲಗಳ ಬಡ್ಡಿದರ ಹಾಗೂ ಇಎಂಐ ಮತ್ತಷ್ಟು ದುಬಾರಿಯಾಗುವ ಸಾಧ್ಯತೆಯಿದೆ.

ಎಂಪಿಸಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, “ಹಿಂದಿನ ಪಾಲಿಸಿ ಸಭೆಯಲ್ಲಿ ಆರ್ಥಿಕತೆ ಶೇ. 6.7ರಷ್ಟು ಬೆಳೆಯಬಹುದು ಎಂದು ಅಂದಾಜಿಸಲಾಗಿತ್ತು. ಈ ಬಾರಿ ಕಮಿಟಿ ವಿಶ್ವಾಸ ಮತ್ತಷ್ಟು ಹೆಚ್ಚಿದೆ. ಈ ಕಾರಣಕ್ಕೆ ರೆಪೋ ದರವನ್ನು ಹೆಚ್ಚಿಸುವ ರಿಸ್ಕ್ ಅನ್ನು ಆರ್‌ಬಿಐ ತೆಗೆದುಕೊಂಡಿದೆ” ಎಂದು ಮಾಹಿತಿ ನೀಡಿದ್ದಾರೆ.

“ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಆರ್‌ಬಿಐಗೆ ಈಗ ಹಣದುಬ್ಬರದ್ದೇ ಹೆಚ್ಚು ತಲೆನೋವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 5.2ರಷ್ಟು ಇರಬಹುದು ಎಂದು ಎಂಪಿಸಿ ಸಭೆಯಲ್ಲಿ ಅಂದಾಜಿಸಲಾಗಿದೆ. ಎರಡನೇ ಕ್ವಾರ್ಟರ್ ಆದ ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಹಣದುಬ್ಬರ ಶೇ 4.9, ಮೂರನೇ ಕ್ವಾರ್ಟರ್‌ನಲ್ಲಿ ಶೇ. 6 ಮತ್ತು ನಾಲ್ಕನೇ ಕ್ವಾರ್ಟರ್‌ನಲ್ಲಿ ಶೇ. 5.7ರಷ್ಟು ವಾರ್ಷಿಕ ದರದಲ್ಲಿ ಹೆಚ್ಚಬಹುದು” ಎಂದು ಹೇಳಿರುವುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!