
ಮಂಗಳೂರು: ಮಂಗಳೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ಪ್ರತಿದಿನ ಸಂಜೆ 4 ಗಂಟೆಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಗಣ್ಯರು ಹಾಗೂ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಈ ಹಿನ್ನೆಲೆಯಲ್ಲಿ ಕೂಳೂರು ಫೆರಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಮಂಗಳೂರು ನಗರ ಪೊಲೀಸ್ ಇಲಾಖೆ ಸಂಚಾರ ಸಲಹೆ ಪ್ರಕಟಿಸಿದೆ.ಕೂಳೂರು ಫೆರಿ ರಸ್ತೆಯ ಕಾರ್ಸ್ಟ್ರೀಟ್, ಬಾಲಾಜಿ ಜಂಕ್ಷನ್, ನ್ಯೂ ಚಿತ್ರಾ ಜಂಕ್ಷನ್, ಅಳಕೆ ಬ್ರಿಡ್ಜ್, ಕುದ್ರೋಳಿ ದೇವಸ್ಥಾನದ ದ್ವಾರ, ದುರ್ಗಾಮಹಲ್ ಜಂಕ್ಷನ್ ಹಾಗೂ ಮಣ್ಣಗುಡ್ಡೆ ಜಂಕ್ಷನ್ ಮಾರ್ಗದಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.ಕೊಟ್ಟಾರ ಚೌಕಿ ಕಡೆಯಿಂದ ಕಾರ್ಸ್ಟ್ರೀಟ್ಗೆ ತೆರಳುವ ವಾಹನಗಳು ಲಾಲ್ಬಾಗ್, ಪಿ.ವಿ.ಎಸ್. ಹಾಗೂ ನವಭಾರತ್ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ. ಕಾರ್ಸ್ಟ್ರೀಟ್ನಿಂದ ಕೂಳೂರು ಫೆರಿ ರಸ್ತೆಯ ಕಡೆಗೆ ತೆರಳುವ ವಾಹನಗಳು ನವಭಾರತ್ ಹಾಗೂ ಪಿ.ವಿ.ಎಸ್. ಮಾರ್ಗವನ್ನು ಬಳಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ.ಇದಲ್ಲದೆ, ಕೂಳೂರು ಫೆರಿ ರಸ್ತೆಯಲ್ಲಿ ನ್ಯೂ ಚಿತ್ರಾ ಜಂಕ್ಷನ್ನಿಂದ ಲೇಡಿಹಿಲ್ವರೆಗೆ ಹಾಗೂ ಸಂಪರ್ಕ ರಸ್ತೆಗಳ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ.
ಸಾರ್ವಜನಿಕರು ನಿಗದಿತ ಪಾರ್ಕಿಂಗ್ ಸ್ಥಳಗಳಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಬೇಕು. ಸುಗಮ ಸಂಚಾರಕ್ಕಾಗಿ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.








